ಕ್ರೀಡೆ

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​​ ಫೈನಲ್​ನಲ್ಲಿ ನೀರಜ್​ಗೆ ನಿರಾಸೆ! ಸಚಿನ್ ಯಾದವ್ ಮಿಂಚಿಂಗ್​​​; ಯಾರು ಈತ? | Sachin Yadav

Sachin Yadav: ಪ್ರಸ್ತುತ ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025ರ ಫೈನಲ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ಸಚಿನ್ ಯಾದವ್ ಮಿಂಚಿದರೆ, ಚಿನ್ನದ ಹುಡುಗ ನೀರಜ್ ಚೋಪ್ರಾ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಪಾಕಿಸ್ತಾನದ ಅರ್ಷದ್ ನದೀಪ್​ ಮತ್ತು ನೀರಜ್ ಚೋಪ್ರಾ ಜಾವೆಲಿನ್ ಫೈನಲ್​ನಲ್ಲಿ ಎದುರು-ಬದುರು ಪೈಪೋಟಿಗಿಳಿಯಲಿದ್ದಾರೆ ಎಂದೇ ಕ್ರೀಡಾಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, 8ನೇ ಸ್ಥಾನವನ್ನು ಅಲಂಕರಿಸಿದ ನೀರಜ್​,​ ಪದಕ ಗೆಲ್ಲುವಲ್ಲಿ ವಿಫಲರಾದರು. ಇನ್ನು ಅರ್ಷದ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಇಬ್ಬರು ಘಟಾನುಘಟಿಗಳನ್ನು ಹಿಂದಿಕ್ಕಿ, ನಾಲ್ಕನೇ ಸ್ಥಾನಕ್ಕೇರಿದ ಸಚಿನ್ ಯಾದವ್​, ಸದ್ಯ ಭಾರತೀಯರ ಹೊಸ ಜಾವೆಲಿನ್​ ಸ್ಟಾರ್​ ಆಗಿ ಕಾಣಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.

ಫೈನಲ್‌ನಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ 86.27 ಮೀಟರ್ ದೂರ ಜಾವೆಲಿನ್ ಎಸೆದ ಸಚಿನ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಸಚಿನ್ ಯಾದವ್​ ಮೇಲಿನ ಭರವಸೆಯನ್ನು ದುಪ್ಪಟ್ಟಾಗಿಸಿದೆ.

ಯಾರು ಈ ಸಚಿನ್ ಯಾದವ್?

ಅಕ್ಟೋಬರ್ 25, 1999ರಂದು ಭಾರತದ ಉತ್ತರ ಪ್ರದೇಶದ ಖೇಕ್ರಾದಲ್ಲಿ ಜನಿಸಿದ ಸಚಿನ್​, ಆರಂಭದಲ್ಲಿ ತಾನೊಬ್ಬ ಕ್ರಿಕೆಟ್​ ಬೌಲರ್​ ಆಗಬೇಕೆಂಬ ಉತ್ಸಾಹ ಹೊಂದಿದ್ದರಂತೆ. 19ನೇ ವಯಸ್ಸಿನಲ್ಲಿದ್ದಾಗ ಜಾವೆಲಿನ್ ಎಸೆತದತ್ತ ಚಿತ್ತ ಹರಿಸಿದ ಈತ, ಈ ಕ್ರೀಡೆಯನ್ನೇ ಕರಗತ ಮಾಡಿಕೊಂಡು ಇಂದು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ದೈತ್ಯ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆರಾಧಿಸುವ ಸಚಿನ್, ಈ ಇಬ್ಬರು ಕ್ರಿಕೆಟಿಗರನ್ನು ತಮ್ಮ ಮೆಚ್ಚಿನ ಸ್ಟಾರ್​ಗಳು ಎಂದು ಬಣ್ಣಿಸಿದ್ದಾರೆ.

2025ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್​, ಈ ವರ್ಷದ ಆರಂಭದಲ್ಲಿ, ಡೆಹ್ರಾಡೂನ್‌ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 84.39 ಮೀಟರ್ ದೂರ ಜಾವೆಲಿನ್​ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು,(ಏಜೆನ್ಸೀಸ್).