ಕ್ರೀಡೆ

ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ: 15 ಸೆಂಟಿಮೀಟರ್‌ನಿಂದ ತಪ್ಪಿದ ಚಿನ್ನ

ಜ್ಯೂರಿಚ್: ಜಾವೆಲಿನ್ ಥ್ರೊನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಲ್ಕೇ ದಿನಗಳ ಅಂತರದಲ್ಲಿ ಪ್ರತಿಷ್ಠಿತ ಡೈಮಂಡ್ ಲೀಗ್‌ನ ಜ್ಯೂರಿಚ್ ಚರಣದಲ್ಲಿ ಕಣಕ್ಕಿಳಿದಿದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ 85.71 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಜಯಿಸಿದ್ದಾರೆ. ಕೇವಲ 15 ಸೆಂಟಿಮೀಟರ್ ಅಂತರದಿಂದ ಅವರು ಚಿನ್ನದ ಪದಕದಿಂದ ವಂಚಿತರಾದರು. ಹಾಲಿ ವರ್ಷದ ಡೈಮಂಡ್ ಲೀಗ್ 3ನೇ ಚರಣದಲ್ಲಿ ಪದಕ ಸಾಧನೆ ಮಾಡಿದ ನೀರಜ್ ಚೋಪ್ರಾ, ಸೆಪ್ಟೆಂಬರ್ 17ರಂದು ಅಮೆರಿಕದಲ್ಲಿ ನಡೆಯಲಿರುವ ಡೈಮಂಡ್ ಲೀಗ್ ೈನಲ್ಸ್‌ಗೆ ಅರ್ಹತೆ ಸಂಪಾದಿಸಿದ್ದಾರೆ. ಇದಕ್ಕೂ ಮುನ್ನ ದೋಹಾ ಹಾಗೂ ಲೌಸನ್ನೆ ಚರಣದಲ್ಲಿ ಅಗ್ರಸ್ಥಾನದೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಲಾಂಗ್ ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಗುರುವಾರ ತಡರಾತ್ರಿ ನಡೆದ ಲೀಗ್‌ನ ನಾಲ್ಕನೇ ಚರಣದಲ್ಲಿ ಮೊದಲ ಮೂರು ಪ್ರಯತ್ನದಲ್ಲಿ 25 ವರ್ಷದ ನೀರಜ್ ಚೋಪ್ರಾ, ಗರಿಷ್ಠ 80.79 ಮೀ. ಭರ್ಜಿ ಎಸೆಯಲಷ್ಟೇ ಶಕ್ತರಾದರು. 2 ಮತ್ತು 3ನೇ ಯತ್ನದಲ್ಲಿ ಅವರು ೌಲ್ ಮಾಡಿದರು. ಉಳಿದ ಮೂರು ಎಸೆತಗಳಲ್ಲಿ 4ನೇ ಯತ್ನದಲ್ಲಿ 85.22 ಮೀ. ಎಸೆದರೆ, 5ನೇ ಯತ್ನದಲ್ಲಿ ಮತ್ತೆ ೌಲ್ ಮಾಡಿದರು. 6ನೇ ಹಾಗೂ ಕೊನೇ ಪ್ರಯತ್ನದಲ್ಲಿ 85.71 ಮೀ ಭರ್ಜಿ ಎಸೆದು ಎರಡನೇ ಸ್ಥಾನ ಪಡೆದರು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಜೆಕ್ ಗಣರಾಜ್ಯದ ಜೇಕಬ್ ವಡ್ಲೆಚ್ 85.86 ಮೀ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಜರ್ಮನಿಯ ಜೂಲಿಯನ್ ವೆಬರ್ 85.04 ಮೀ. ಎಸೆತದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗಾಯದ ಸಮಸ್ಯೆಯಿಂದಾಗಿದ ಮೊನಾಕೊ ಲೀಗ್‌ನಿಂದ ಹೊರಗುಳಿದಿದ್ದ ನೀರಜ್ ಚೋಪ್ರಾ ಪಾಲಿಗೆ ಇದು ಮೂರನೇ ಲೀಗ್ ಆಗಿದೆ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಮೂರು ಕೂಟದಿಂದ 23 ಅಂಕ ಕಲೆಹಾಕಿ ಮೂರನೇ ಸ್ಥಾನದೊಂದಿಗೆ ೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಡೈಮಂಡ್ ಲೀಗ್‌ನ 4 ಚರಣದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಗ್ರ ಆರು ಜಾವೆಲಿನ್ ಎಸೆತಗಾರರು ಮಾತ್ರ ೈನಲ್‌ಗೆ ಅರ್ಹತೆ ಸಂಪಾದಿಸಿದರು. ವಡ್ಲೆಚ್ (29 ಅಂಕ) ಹಾಗೂ ಜೂಲಿಯನ್ ವೆಬರ್ (25) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ.

5 ಲಕ್ಷ ರೂ. ಬಹುಮಾನ

ಜ್ಯೂರಿಚ್ ಚರಣದಲ್ಲಿ ಬೆಳ್ಳಿ ಪದಕದೊಂದಿಗೆ ನೀರಜ್ ಚೋಪ್ರಾ 5 ಲಕ್ಷ ರೂ. ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡರು. ಕಳೆದ ವರ್ಷದ ಡೈಮಂಡ್ ಲೀಗ್ ಫೈನಲ್‌ನಲ್ಲಿ ನೀರಜ್ ವಜ್ರದ ಟ್ರೋಫಿ ಜಯಿಸಿದ್ದರು. ೈನಲ್‌ನಲ್ಲಿ ಗೆದ್ದರೆ 24.80 ಲಕ್ಷ ರೂ. ಬಹುಮಾನವನ್ನೂ ಪಡೆಯಲಿದ್ದಾರೆ.

ಶ್ರೀಶಂಕರ್‌ಗೆ 5ನೇ ಸ್ಥಾನ

ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಐದನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಒಟ್ಟಾರೆ 14 ಅಂಕ ಪಡೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪ್ರಯತ್ನದಲ್ಲಿ 7.99 ಮೀ ದೂರಕ್ಕೆ ಜಿಗಿದ ಮುರಳಿ ಮೊದಲ ಸುತ್ತಿನಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದ್ದರು, ಅಂತಿಮ 2 ಪ್ರಯತ್ನದಲ್ಲಿ ಮೊದಲ ಯತ್ನವನ್ನೂ ಉತ್ತಮ ಪಡಿಸಿಕೊಳ್ಳುವಲ್ಲಿ ಎಡವಿದ ಮುರಳಿ 5ನೇ ಸ್ಥಾನಕ್ಕೆ ಕುಸಿದರು. ಪ್ಯಾರಿಸ್‌ನಲ್ಲಿ 8.09, ಮೀ ಜಿಗಿತದೊಂದಿಗೆ 3ನೇ ಸ್ಥಾನ ಪಡೆದಿದ್ದ ಶ್ರೀಶಂಕರ್, ಲೌಸನ್ನೆಯಲ್ಲಿ 7.88 ಮೀಟರ್ ಜಿಗಿತದೊಂದಿಗೆ ಐದನೇ ಸ್ಥಾನಕ್ಕೆ ಪಡೆದುಕೊಂಡಿದ್ದರು.