ಕ್ರೀಡೆ

ಪಾಕಿಸ್ತಾನದ ಅರ್ಷದ್​ ನದೀಂರನ್ನು ಬೆಂಗಳೂರಿಗೆ ಆಹ್ವಾನಿಸಿದ್ದಕ್ಕೆ ನಿಂದನೆ; ಬೇಸರ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ ನೀರಜ್​ ಚೋಪ್ರಾ

ನವದೆಹಲಿ: ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಎನ್​ಸಿ ಕ್ಲಾಸಿಕ್​ ಅಥ್ಲೆಟಿಕ್ಸ್​ ಕೂಟಕ್ಕೆ ಪಾಕಿಸ್ತಾನದ ಅರ್ಷದ್​ ನದೀಂರನ್ನು ಆಹ್ವಾನಿಸಿರುವುದಕ್ಕೆ ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ದ್ವೇಷ ಮತ್ತು ನಿಂದನೆಗೆ ಗುರಿಯಾಗಿದ್ದಾರೆ. ಪಹಲ್ಗಾಮ್​ ಉಗ್ರರ ದಾಳಿಗೆ ಎರಡು ದಿನ ಮೊದಲೇ ತಾನು ಅರ್ಷದ್​ಗೆ ಆಹ್ವಾನ ನೀಡಿದ್ದೆ. ಪಹಲ್ಗಾಮ್​ ದಾಳಿಯ ನಂತರದಲ್ಲಿ ಅರ್ಷದ್​ಗೆ ಸ್ಪರ್ಧಿಸುವ ಅವಕಾಶ ನೀಡುವ ಪ್ರಶ್ನೆಯೇ ಎದುರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ನೀರಜ್​, ತನ್ನ ಬದ್ಧತೆ ಮತ್ತು ದೇಶಪ್ರೇಮವನ್ನು ಪ್ರಶ್ನಿಸಿರುವ ನಿಂದನೆಗಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ ಸ್ವರ್ಣ ಮತ್ತು ಪ್ಯಾರಿಸ್​ ಒಲಿಂಪಿಕ್ಸ್​ ರಜತ ವಿಜೇತ ನೀರಜ್​, ತನ್ನ ಕುಟುಂಬವನ್ನೂ ನಿಂದಿಸಲಾಗುತ್ತಿರುವ ಬಗ್ಗೆ ಬೇಸರಗೊಂಡಿದ್ದಾರೆ. ಚೊಚ್ಚಲ ಆವೃತ್ತಿಯ ನೀರಜ್​ ಚೋಪ್ರಾ (ಎನ್​ಸಿ) ಕ್ಲಾಸಿಕ್​ ಕೂಟ ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹಲವು ವಿದೇಶಿ ಸ್ಟಾರ್​ ಜಾವೆಲಿನ್​ ಎಸೆತಗಾರರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

"ಪಹಲ್ಗಾಮ್​ ದಾಳಿ ನನಗೂ ಅಪಾರ ನೋವು ತಂದಿದೆ. ನನಗೂ ಈ ಟನೆ ಸಿಟ್ಟು ತರಿಸಿದೆ. ಆದರೆ ನಾನು ಪಹಲ್ಗಾಮ್​ ದಾಳಿಗೆ 2 ದಿನ ಮುನ್ನ, ಓರ್ವ ಅಥ್ಲೀಟ್​ ಆಗಿ ಇನ್ನೋರ್ವ ಅಥ್ಲೀಟ್​ಗೆ ಆಹ್ವಾನ ನೀಡುವಂತೆ ಅರ್ಷದ್​ ನದೀಂರನ್ನು ಆಹ್ವಾನಿಸಿದ್ದೆ. ಪಹಲ್ಗಾಮ್​ ದಾಳಿ ಬಳಿಕ ಅರ್ಷದ್​ ಸ್ಪರ್ಧೆಗೆ ಅವಕಾಶ ನೀಡುವ ಪ್ರಶ್ನೆಯೇ ಬರುವುದಿಲ್ಲ. ನನಗೆ ಯಾವಾಗಲೂ ದೇಶವೇ ಮೊದಲು' ಎಂದು ಭಾರತೀಯ ಸೇನೆಯಲ್ಲಿ ಸುಬೇದಾರ್​ ಮೇಜರ್​ ಆಗಿರುವ ನೀರಜ್​ ಎಕ್ಸ್​ನಲ್ಲಿ ಬರೆದಿದ್ದಾರೆ.

ಅಮ್ಮನಿಗೂ ನಿಂದನೆ ಬಿಸಿ

ಕಳೆದ ವರ್ಷ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅರ್ಷದ್​ ನದೀಂ, ನೀರಜ್​ರನ್ನು ಮೀರಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಆಗ ನೀರಜ್​ ತಾಯಿ ಸರೋಜ್​, ಅರ್ಷದ್​ ಕೂಡ ನನ್ನ ಮಗನಿದ್ದಂತೆ ಎಂದಿದ್ದರು. ಆಗ ಈ ಹೇಳಿಕೆಯನ್ನು ಪ್ರಶಂಸಿಸಲಾಗಿತ್ತು. ಆದರೆ ಇದೀಗ ಅದೇ ಹೇಳಿಕೆಗಾಗಿ ನೀರಜ್​ ಅಮ್ಮನನ್ನೂ ನಿಂದಿಸಲಾಗುತ್ತಿದೆ. ಈ ಬಗ್ಗೆಯೂ ನೀರಜ್​ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.