ಕ್ರೀಡೆ

ನೀರಜ್ ಚೋಪ್ರಾಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ! Neeraj Chopraಗೆ ಭಾರತೀಯ ಸೇನೆಯಿಂದ ಗೌರವ

Neeraj Chopra: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯು ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ ಅವರಿಗೆ ಅಪರೂಪದ ಗೌರವವೊಂದು ಸಂದಿದೆ. ಭಾರತೀಯ ಸೇನೆಯು ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಿ ಹೇಳಿಕೆ ನೀಡಿದೆ. ರಕ್ಷಣಾ ಸಚಿವಾಲಯವು ಭಾರತದ ಗೆಜೆಟ್‌ನಲ್ಲಿ ಈ ಘೋಷಣೆ ಮಾಡಿದೆ. ನೀರಜ್ ಅವರ ಹೊಸ ಶ್ರೇಣಿಯು ಏಪ್ರಿಲ್ 16, 2025 ರಿಂದ ಜಾರಿಗೆ ಬಂದಿತು.

"1948 ರ ಪ್ರಾದೇಶಿಕ ಸೇನಾ ನಿಯಮಾವಳಿಗಳ ಪ್ಯಾರಾಗ್ರಾಫ್ 31 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಏಪ್ರಿಲ್ 16, 2025 ರಿಂದ ಜಾರಿಗೆ ಬರುವಂತೆ ಹರಿಯಾಣದ ಪಾಣಿಪತ್‌ನ ಗ್ರಾಮ ಮತ್ತು ಅಂಚೆ ಕಚೇರಿ ಖಂಡ್ರಾದ ನೀರಜ್ ಚೋಪ್ರಾ, ಪಿವಿಎಸ್‌ಎಂ, ಪದ್ಮಶ್ರೀ, ವಿಎಸ್‌ಎಂ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ" ಎಂದು ಹೇಳಿಕೆ ತಿಳಿಸಿದೆ.

ನೀರಜ್ 2016 ರಲ್ಲಿ ನಯೀಬ್ ಸುಬೇದಾರ್ ಹುದ್ದೆಯೊಂದಿಗೆ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ ಭಾರತೀಯ ಸೇನೆಗೆ ಸೇರಿದರು. ಅವರಿಗೆ 2021 ರಲ್ಲಿ ಸುಬೇದಾರ್ ಆಗಿ ಬಡ್ತಿ ನೀಡಲಾಯಿತು. ನಂತರ ಅವರಿಗೆ ಸುಬೇದಾರ್ ನಿಂದ ಮೇಜರ್ ಆಗಿ ಬಡ್ತಿ ನೀಡಲಾಯಿತು.