ಚೆನ್ನೈ: ನಾಯಕ ನವೀನ್ ಕುಮಾರ್ (11 ಅಂಕ) ಅವರ 11 ಯಶಸ್ವಿ ರೈಡಿಂಗ್ಗಳ ಬಲದಿಂದ ದಬಾಂಗ್ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಎದುರು 38-29 ಅಂತರದಿಂದ ಗೆಲುವು ದಾಖಲಿಸಿದೆ.
ಎಸ್ಡಿಎಟಿ ಮಲ್ಟಿ ಪರ್ಪಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಚರಣದಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ದೆಹಲಿ ಮೊದಲಾರ್ಧದಲ್ಲೇ ಬೆಂಗಾಲ್ ತಂಡವನ್ನು 2 ಬಾರಿ ಆಲೌಟ್ ಮಾಡಿ 23-16ರಿಂದ ಮುನ್ನಡೆ ಸಾಧಿಸಿತು. ದ್ವೀತಿಯಾರ್ಧದಲ್ಲಿ ಬೆಂಗಾಲ್ ನಿಕಟ ಪ್ರತಿಸ್ಪರ್ಧೆ ತೋರಿದರೂ, ದೆಹಲಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ (6) ದೆಹಲಿ ರಕ್ಷಣಾ ವಿಭಾಗವನ್ನು ಬೇಧಿಸುವಲ್ಲಿ ಹೆಚ್ಚಿನ ಯಶ ಕಾಣಲಿಲ್ಲ. ದೆಹಲಿ ಡಿಫೆಂಡರ್ಗಳಾದ ಯೋಗೇಶ್ (6) ಮತ್ತು ಆಶಿಶ್ (6) ಭದ್ರ ರಕ್ಷಣಾ ಕೋಟೆ ನಿರ್ಮಿಸಿದರು. ಬೆಂಗಾಲ್ ಪರ ರೈಡರ್ ನಿತಿನ್ ಕುಮಾರ್ (9) ಹೋರಾಟ ವ್ಯರ್ಥವಾಯಿತು.
ತಲೈವಾಸ್ಗೆ ತವರಿನಲ್ಲಿ ಹ್ಯಾಟ್ರಿಕ್ ಸೋಲು: ತಮಿಳ್ ತಲೈವಾಸ್ ತಂಡ ತವರು ಚರಣದಲ್ಲಿ ಸತತ 3ನೇ ಸೋಲು ಅನುಭವಿಸಿದೆ. ತಲೈವಾಸ್ ತಂಡ ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ಸಂಟಿತ ಹೋರಾಟದ ಎದುರು 29-42 ಅಂಕಗಳಿಂದ ಪರಾಭವಗೊಂಡಿತು.