ವೆಲ್ಲಿಂಗ್ಟನ್: ನಾಥನ್ ಲ್ಯಾನ್ (65ಕ್ಕೆ 6) ಸ್ಪಿನ್ ದಾಳಿಗೆ ತತ್ತರಿಸಿದ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಎದುರು 172 ರನ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 1-0 ಮುನ್ನಡೆ ಸಾಧಿಸಿದೆ.
ಬಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಗೆಲುವಿಗೆ 368 ರನ್‌ಗಳ ಗುರಿ ಬೆನ್ನಟ್ಟಿದ ಕಿವೀಸ್, 3 ವಿಕೆಟ್‌ಗೆ 111 ರನ್‌ಗಳಿಂದ 4ನೇ ದಿನದ ಆಟ ಮುಂದುವರಿಸಿತು. ಭೋಜನಾ ವಿರಾಮಕ್ಕೂ ಮುನ್ನವೇ ಕಿವೀಸ್ 64.4 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯಾ: 383 ಹಾಗೂ 164, ನ್ಯೂಜಿಲೆಂಡ್: 179 ಹಾಗೂ 196 (ರಚಿನ್ 59, ಡೆರಿಲ್ 38, ಕುಗ್‌ಲಿಜಿನ್ 26, ಮ್ಯಾಟ್ ಹೆನ್ರಿ 14, ನಾಥನ್ ಲ್ಯಾನ್ 65ಕ್ಕೆ 6, ಹ್ಯಾಸಲ್‌ವುಡ್ 20ಕ್ಕೆ 2). ಪಂದ್ಯಶ್ರೇಷ್ಠ: ಕ್ಯಾಮರಾನ್ ಗ್ರೀನ್.
ಲ್ಯಾನ್ ದಾಖಲೆ: ಟೆಸ್ಟ್ ಪಂದ್ಯವೊಂದರಲ್ಲಿ ಐದನೇ ಬಾರಿಗೆ 10 ವಿಕೆಟ್ ಗೊಂಚಲು ಪಡೆದ ನಾಥನ್ ಲ್ಯಾನ್, ಗರಿಷ್ಠ 9 ದೇಶಗಳಲ್ಲಿ 5 ವಿಕೆಟ್ ಪಡೆದ 3ನೇ ಸ್ಪಿನ್ನರ್ ಎನಿಸಿದರು. ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್ ಮೊದಲಿಬ್ಬರು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ ಲ್ಯಾನ್ ಟೆಸ್ಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಿಂಡೀಸ್ ವೇಗಿ ಕರ್ಟ್ನಿ ವಾಲ್ಷ್ (519) ಅವರನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿದ್ದರು.