ಕ್ರೀಡೆ

ಬೆಂಗಳೂರಿಗೆ ವಿಶೇಷ ಸ್ಥಾನ ದೊರಕಿಸಿಕೊಡಲಿರುವ ನಮ್ಮ ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ ಮಾಸ್ಟರ್ಸ್‌ ಓಪನ್‌ ಚೆಸ್‌ ಪಂದ್ಯಾವಳಿ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಹತ್ತು ಸುತ್ತಿನ ಸ್ವಿಸ್‌ ಲೀಗ್‌ - ನಮ್ಮ ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ ಮಾಸ್ಟರ್ಸ್‌ ಓಪನ್‌ ಚೆಸ್‌ ಪಂದ್ಯಾವಳಿ, ವಿಶ್ವ ಚೆಸ್‌ ಭೂಪಟದಲ್ಲಿ ಬೆಂಗಳೂರು ನಗರಕ್ಕೆ ವಿಶೇಷ ಸ್ಥಾನಮಾನ ಒದಗಿಸಿಕೊಡಲಿದೆ ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಇಂದು 2ನೇ ನಮ್ಮ ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ ಮಾಸ್ಟರ್ಸ್‌ ಓಪನ್‌ ಚೆಸ್‌ ಪಂದ್ಯಾವಳಿ 2025ರ ಮೂರನೇ ದಿನದ ಎ ಗ್ರೇಡ್‌ ಚೆಸ್‌ ಪಂದ್ಯಾವಳಿಗೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಹುರಿದುಂಬಿಸಿ ಮಾತನಾಡಿದರು. ನಮ್ಮ ರಾಜ್ಯ ಸರಕಾರ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಎರಡನೇ ಬಾರಿ ಆಯೋಜಿಸಲಾಗಿರುವ ಈ ಪಂದ್ಯಾವಳಿಯಲ್ಲಿ 2 ಸಾವಿರಕ್ಕೂ ಹೆಚ್ಚು ಆಟಗಾರರು ನೋಂದಣಿ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಜನರು  ಪಾಲ್ಗೊಳ್ಳುವ ಮೂಲಕ ಈ ಪಂದ್ಯಾವಳಿಯ ಮಹತ್ವವನ್ನು ಸಾರಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವವಾಗಿದೆ. ಸ್ಪರ್ಧಿಗಳು ಉತ್ತಮ ಆಟವನ್ನಾಡುವತ್ತ ಹೆಚ್ಚಿನ ಗಮನ ನೀಡಬೇಕು. ಸೋಲು ಮತ್ತು ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ಜಿಎಂ ಓಪನ್‌ ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಸೌಮ್ಯ ಎಂ.ಯು ಮಾತನಾಡಿ , ರಾಜ್ಯ ಸರಕಾರ ಹಾಗೂ ಆಟಗಾರರಿಂದ ಉತ್ತಮ ಸಹಕಾರ ದೊರೆಯುತ್ತಿದೆ ಎಂದರು