ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೆಲಿಯನ್ ಓಪನ್ನಲ್ಲಿ ಭಾರತದ ತಾರೆ ಸುಮಿತ್ ನಗಾಲ್ ಅವರ ಕನಸಿನ ಓಟ ಎರಡನೇ ಸುತ್ತಿನಲ್ಲಿ ಕೊನೆಗೊಂಡಿದೆ. ಅರ್ಹತಾ ಸುತ್ತಿನಿಂದ ಮೇಲೇರಿ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸುವ ಮೂಲಕ ದಾಖಲೆ ಬರೆದಿದ್ದ ಸುಮಿತ್ ನಗಾಲ್, ವೈಲ್ಡ್ಕಾರ್ಡ್ ಪ್ರವೇಶ ಪಡೆದಿರುವ ಚೀನಾದ ಯುವ ಆಟಗಾರ ಜುನ್ಚೆಂಗ್ ಶಾಂಗ್ ವಿರುದ್ಧ 2ನೇ ಸುತ್ತಿನಲ್ಲಿ ಮುಗ್ಗರಿಸಿದರು.
26 ವರ್ಷದ ಸುಮಿತ್ ನಗಾಲ್ ಗುರುವಾರ ನಡೆದ ಎರಡು ಗಂಟೆ 50 ನಿಮಿಷಗಳ ಕಾದಾಟದಲ್ಲಿ 18 ವರ್ಷದ ಶಾಂಗ್ ಎದುರು 6&2, 3&6, 5&7, 4&6ರಿಂದ ಸೋಲು ಕಂಡರು. ಇದರ ನಡುವೆ ಅವರು 98 ಲಕ್ಷ ರೂ. ಬಹುಮಾನ ಒಲಿಸಿಕೊಂಡರು. ವಿಶ್ವ ನಂ. 137 ನಗಾಲ್ ತನಗಿಂತ ಕೆಳ ಶ್ರೇಯಾಂಕಿತನ ಎದುರು ಮೊದಲ ಸೆಟ್ ಗೆದ್ದು ಬೀಗಿದರೂ, ನಂತರದಲ್ಲಿ ಲಯ ತಪ್ಪಿದರು. ಶಾಂಗ್ ಬಲಿಷ್ಠ ಸರ್ವ್ನಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತ ಸಾಗಿದರು.
ಬೋಪಣ್ಣ ಶುಭಾರಂಭ: ಪುರುಷರ ಡಬಲ್ಸ್ ವಿಭಾಗದಲ್ಲಿ 2ನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಮತ್ತು ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಶುಭಾರಂಭ ಕಂಡಿತು. ಕನ್ನಡಿಗ ಬೋಪಣ್ಣ ಮತ್ತು ಎಬ್ಡೆನ್ 7&6, 4&6, 7&6ರಿಂದ ಆಸ್ಟ್ರೆಲಿಯಾದ ಡಕ್ವರ್ತ್&ಪೋಲ್ಮನ್ಸ್ ವಿರುದ್ಧ ಗೆಲುವು ಸಾಧಿಸಿದರು.