ಕ್ರೀಡೆ

ಡೇವಿಸ್ ಕಪ್ ಪಂದ್ಯಕ್ಕೆ ನಗಾಲ್ ಗೈರು: ಕಾರಣ ಹೀಗಿದೆ...

ನವದೆಹಲಿ: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಮುಂಬರುವ ಡೇವಿಸ್ ಕಪ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್ 14-15 ರಂದು ಆತಿಥೇಯ ಸ್ವೀಡನ್ ವಿರುದ್ಧ ಸ್ಟಾಕ್ ಹೋಮ್‌ನಲ್ಲಿ ನಿಗದಿಯಾಗಿರುವ ಪಂದ್ಯಕ್ಕೆ ಅಲಭ್ಯರಾಗುವುದಾಗಿ ನಗಾಲ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇವರ ಸ್ಥಾನಕ್ಕೆ ಮೀಸಲು ಆಟಗಾರರಾಗಿರುವ ಆರ್ಯನ್ ಶಾ, ಮಾನಸ್ ಧಾಮ್ನೆ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಇತ್ತೀಚೆಗೆ ಯುಎಸ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದ ನಗಾಲ್,ಸ್ವೀಡನ್ ವಿರುದ್ಧ ಮುಂಬರುವ ಡೇವಿಸ್ ಕಪ್ ಟೈನಲ್ಲಿ ಭಾರತ ತಂಡ ಪ್ರತಿನಿಧಿಸಲು ಎದುರು ನೋಡುತ್ತಿದ್ದೇನೆ. ಆದರೆ ಕಳೆದ ಕೆಲವು ವಾರಗಳಿಂದ ನನ್ನನ್ನು ಕಾಡುತ್ತಿರುವ ಬೆನ್ನಿನ ಸಮಸ್ಯೆಯಿಂದಾಗಿ, ಮುಂದಿನ ಎರಡು ವಾರಗಳವರೆಗೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಸ್ವೀಡನ್‌ನಲ್ಲಿ ತಯಾರಿ ಮತ್ತು ಸ್ಪರ್ಧಿಸಲು ನನಗೆ ಸಾಕಷ್ಟು ಸಮಯವಿಲ್ಲ. ಯುಎಸ್ ಓಪನ್ ಡಬಲ್ಸ್‌ನಿಂದಲೂ ಹಿಂದೆ ಸರಿಯಲು ಇದೇ ಪ್ರಮುಖ ಕಾರಣವಾಗಿದೆ. ಭಾರತ ತಂಡಕ್ಕೆ ಶುಭವಾಗಲಿ ಎಂದು ಸೋಮವಾರ ತಿಳಿಸಿದ್ದಾರೆ. ಭಾರತದ ಅತ್ಯುನ್ನತ ಶ್ರೇಯಾಂಕದ ಸಿಂಗಲ್ಸ್ ಆಟಗಾರ ಡೇವಿಸ್ ಕಪ್ ಭಾಗವಾಗದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಮಾಜಿ ರಾಷ್ಟ್ರೀಯ ಚಾಂಪಿಯನ್ ಅಶುತೋಷ್ ಸಿಂಗ್ ರಾಷ್ಟ್ರೀಯ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ.