ಕ್ರೀಡೆ

13ನೇ ಬಾರಿ ಫ್ರೆಂಚ್ ಓಪನ್ ಫೈನಲ್‌ಗೇರಿದ ರಾಫೆಲ್ ನಡಾಲ್

ಪ್ಯಾರಿಸ್: ಕ್ಲೇಕೋರ್ಟ್ ಕಿಂಗ್ ರಾಫೆಲ್ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪ್ರಶಸ್ತಿ ಜಯಿಸುವುದರಿಂದ ಕೇವಲ ಒಂದು ಹೆಜ್ಜೆ ದೂರ ನಿಂತಿದ್ದಾರೆ. ಅರ್ಜೆಂಟೀನಾದ ಆಟಗಾರ ಡೀಗೋ ಶ್ವರ್ಟ್‌ಮನ್ ವಿರುದ್ಧ ನೇರಸೆಟ್ ಗೆಲುವು ದಾಖಲಿಸುವ ಮೂಲಕ ನಡಾಲ್ ರೋಲ್ಯಾಂಡ್ ಗ್ಯಾರಸ್‌ನಲ್ಲಿ ದಾಖಲೆಯ 13ನೇ ಬಾರಿ ಫೈನಲ್‌ಗೇರಿದ್ದಾರೆ. ಈ ಹಿಂದಿನ 12 ಬಾರಿಯೂ ಫೈನಲ್‌ನಲ್ಲಿ ಸೋಲು ಕಾಣದ ಅಜೇಯ ದಾಖಲೆ ಅವರದಾಗಿದೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಸ್ಪೇನ್ ತಾರೆ ನಡಾಲ್ 6-3, 6-3, 7-6 (7-0) ರಿಂದ ಸ್ವರ್ಟ್‌ಮನ್ ಸವಾಲು ಹಿಮ್ಮೆಟ್ಟಿಸಿದರು. ಫೈನಲ್ ಹಾದಿಯಲ್ಲಿ 34 ಗೇಮ್ ಮಾತ್ರ ಸೋತಿರುವ 34 ವರ್ಷದ ನಡಾಲ್, ಒಂದೂ ಸೆಟ್ ಸೋಲದೆ ಮುನ್ನಡೆದಿದ್ದಾರೆ.

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಡಾಲ್, ಅಗ್ರ ಶ್ರೇಯಾಂಕಿತ ನೊವಾಕ್ ಜೋಕೊವಿಕ್ ಮತ್ತು 5ನೇ ಶ್ರೇಯಾಂಕಿತ ಸ್ಟೆಾನೋಸ್ ಸಿಸಿಪಾಸ್ ನಡುವಿನ 2ನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.