ಕ್ರೀಡೆ

ಐವರು ಕ್ರಿಕೆಟಿಗರಿಗೆ ನಾಡಾ ನೋಟಿಸ್; ಪಾಸ್​ವರ್ಡ್ ಸಮಸ್ಯೆ ಎಂದ ಬಿಸಿಸಿಐ

ನವದೆಹಲಿ: ತಾವು ಎಲ್ಲಿದ್ದಾರೆ ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ದಳ (ನಾಡಾ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕೇಂದ್ರೀಯ ಗುತ್ತಿಗೆ ಹೊಂದಿರುವ ಅನುಭವಿ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ, ಕರ್ನಾಟಕದ ಕೆಎಲ್ ರಾಹುಲ್, ಆಲ್ರೌಂಡರ್ ರವೀಂದ್ರ ಜಡೇಜಾ ಸೇರಿ ಐವರು ಆಟಗಾರರಿಗೆ ನೋಟಿಸ್ ಜಾರಿ ಮಾಡಿದೆ. ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂದನಾ ಹಾಗೂ ದೀಪ್ತಿ ಶರ್ಮ ಕೂಡ ನೋಟಿಸ್ ನೀಡಲಾಗಿದೆ.

ವಿಷಯ ತಿಳಿಯುತ್ತಲೇ ಪರಿಸ್ಥಿತಿಯ ನಿಯಂತ್ರಣಕ್ಕೆ ಮುಂದಾದ ಬಿಸಿಸಿಐ, ಮಾಹಿತಿ ದಾಖಲಿಸಬೇಕಾದ ಉದ್ದೀಪನಾ ಮದ್ದು ನಿಗ್ರಹ ಆಡಳಿತ ಮತ್ತು ನಿರ್ವಹಣೆ ಪದ್ಧತಿಯ (ಎಡಿಎಎಂಎಸ್) ಪಾಸ್​ವರ್ಡ್ ಸಮಸ್ಯೆಯಿಂದಾಗಿ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ. ಇದರಲ್ಲಿ ಆಟಗಾರರ ತಪ್ಪೇನು ಇಲ್ಲ ಎಂದು ಸಮಜಾಯಿಷಿ ನೀಡಿದೆ. ರಾಷ್ಟ್ರೀಯ ನೋಂದಾಯಿತ ಟೆಸ್ಟಿಂಗ್ ಪೂಲ್​ನಲ್ಲಿ (ಎನ್​ಆರ್​ಟಿಪಿ) 110 ಆಟಗಾರರು ಇದ್ದಾರೆ. ಇವರಲ್ಲಿ ಈ ಐವರ ಮಾಹಿತಿ ಸಲ್ಲಿಕೆಯಲ್ಲಿ ವಿಳಂಬವಾಗಿರುವುದನ್ನು ನಾಡಾ ಗಂಭೀರವಾಗಿ ಪರಿಗಣಿಸಿದೆ. ಈ ಐವರು ಆಟಗಾರರ ಬಗೆಗಿನ ಮಾಹಿತಿ ದಾಖಲಿಸುವಲ್ಲಿ ಆಗಿರುವ ವಿಳಂಬಕ್ಕೆ ಬಿಸಿಸಿಐನಿಂದ ತೃಪ್ತಿಕರವಾದ ಸ್ಪಷ್ಟನೆ ಬಂದಿದೆ ಎಂದು ನಾಡಾದ ಡಿಜಿ ನವೀನ್ ಅಗರ್​ವಾಲ್ ತಿಳಿಸಿದ್ದಾರೆ.

ಎಡಿಎಎಂಎಸ್​ನಲ್ಲಿ ಮಾಹಿತಿ ಸಲ್ಲಿಸಲು ಇರುವ ಅವಕಾಶಗಳ ಬಗ್ಗೆ ವಿವರಣೆ ನೀಡಿರುವ ಅವರು, ತಾವು ಎಲ್ಲಿದ್ದರು ಎಂಬ ಬಗ್ಗೆ ಸ್ವತಃ ಕ್ರೀಡಾಪಟುಗಳೇ ಮಾಹಿತಿ ದಾಖಲಿಸಬಹುದು. ಇಲ್ಲವೇ ಆಯಾ ಕ್ರೀಡೆಗಳ ಆಡಳಿತ ಮಂಡಳಿಗಳು ಈ ಜವಾಬ್ದಾರಿಯನ್ನು ನಿಭಾಯಿಸ ಬಹುದು. ಕೆಲವರಿಗೆ ಇಂಟರ್​ನೆಟ್ ಬಳಕೆಯ ಜ್ಞಾನ ಇರುವುದಿಲ್ಲ. ಆಗ ಮಾಹಿತಿ ಸಲ್ಲಿಕೆ ಜವಾಬ್ದಾರಿಯನ್ನು ಆಡಳಿತ ಮಂಡಳಿಗಳ ಸಹಾಯ ಪಡೆಯುತ್ತಾರೆಂದು ಹೇಳಿದ್ದಾರೆ. ಕ್ರಿಕೆಟರ್​ಗಳ ವಿಷಯಕ್ಕೆ ಬಂದಾಗ ಮಾಹಿತಿ ದಾಖಲಿಸುವ ಜ್ಞಾನ, ಸೌಲಭ್ಯಗಳು ಅವರಿಗೆ ಲಭ್ಯವಿರುತ್ತವೆ. ಆದರೆ, ಅವರದ್ದೇ ಆದ ಕಾರಣಗಳಿಗಾಗಿ ಅವರು ಸ್ವತಃ ಮಾಹಿತಿ ದಾಖಲಿಸುವುದಿಲ್ಲ. ಇದರ ಜವಾಬ್ದಾರಿಯನ್ನು ಬಿಸಿಸಿಐಗೆ ವಹಿಸಿರುತ್ತಾರೆಂದು ಅಗರ್​ವಾಲ್​ತಿಳಿಸಿದ್ದಾರೆ.

ಮಾಹಿತಿ ನೀಡದಿದ್ದರೆ...?: ಯಾವುದೇ ಕ್ರೀಡಾಪಟು ಆಥವಾ ಆಯಾ ಕ್ರೀಡೆಗಳ ಆಡಳಿತ ಮಂಡಳಿ ಕ್ರೀಡಾಪಟುಗಳ ಕುರಿತು ಮಾಹಿತಿ ನೀಡಲು ಸತತ 3 ಬಾರಿ ವಿಫಲವಾದರೆ, ನಾಡಾ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ತಪ್ಪಿಗಾಗಿ ಅದು ಆಯಾ ಕ್ರೀಡಾಪಟುಗೆ 2 ವರ್ಷ ನಿಷೇಧ ಶಿಕ್ಷೆಯನ್ನೂ ನೀಡಬಹುದಾಗಿದೆ.

ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ಆಟಗಾರರು ಆರಾಮಾವಾಗಿದ್ದರು. ಇದೀಗ ನೋಟಿಸ್ ಪಡೆದಿರುವ ಆಟಗಾರರ ಪೈಕಿ ಕೆಲವು ಆಟಗಾರರ ಇನ್​ಸ್ಟಾಗ್ರಾಂ ಮತ್ತು ಪಾಡ್​ಕಾಸ್ಟ್ ಗಳನ್ನು ಅವರವರ ಏಜೆಂಟರು ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಎಡಿಎಎಂಎಸ್​ನ ಪಾಸ್​ವರ್ಡ್ ಕಳೆದಿತ್ತು ಎನ್ನುವುದಾದರೆ, ಮಾಹಿತಿ ದಾಖಲಿಸುವಂತೆ ಆಟಗಾರರಿಗೆ ಸೂಚಿಸಬಹುದಿತ್ತು. ಮಾನವೀಯತೆ ದೃಷ್ಟಿಯಿಂದ ನಾಡಾ ಈ ಬಾರಿ ಕ್ಷಮಿಸಬಹುದು. ಒಂದು ವೇಳೆ ಅಧಿಕೃತವಾಗಿ ಎಚ್ಚರಿಕೆ ನೀಡಿದರೆ, ಮುಂದಿನ ತೊಂದರೆಗಳಿಗೆ ಯಾರು ಹೊಣೆ? | ಬಿಸಿಸಿಐ ಹಿರಿಯ ಅಧಿಕಾರಿ