ನವದೆಹಲಿ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಸಾಧನೆಯಿಂದ ಇಡೀ ಪಾಕಿಸ್ತಾನವೇ ಅರ್ಷದ್ ನದೀಮ್ರನ್ನು ಕೊಂಡಾಡುತ್ತಿದೆ. ಅಲ್ಲದೆ, ಭರ್ಜರಿ ಸ್ವಾಗತವನ್ನು ಸಹ ಕೋರಿದೆ. ಇದರ ಬೆನ್ನಲ್ಲೇ ನದೀಮ್ ಪಾಕ್ ಸರ್ಕಾರದ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೇವಾಲ್ ಜಿಲ್ಲೆಯ ಮಿಯಾನ್ ಚನ್ನು ನಗರದಲ್ಲಿ ನದೀಮ್ಗೆ ಭರ್ಜರಿ ಸ್ವಾಗತ ಸಿಕ್ಕಿತು. ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿ ನದೀಮ್ಗೆ ಹೂಮಳೆಗೆರೆದು ಭವ್ಯ ಸ್ವಾಗತ ಕೋರಿದರು. ಚಿನ್ನದ ಪದಕದೊಂದಿಗೆ ಜಗದ್ವಿಖ್ಯಾತಿ ಗಳಿಸಿರುವ ನದೀಮ್, ತನ್ನ ಸ್ವಾರ್ಥವನ್ನು ಮೆರೆಯದೇ ತನ್ನ ಹುಟ್ಟೂರಿಗಾಗಿ ಮಿಡಿದಿದ್ದಾರೆ. ತನ್ನ ಗ್ರಾಮದ ಜನರ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆರೆದಿಟ್ಟಿದ್ದಾರೆ. ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸರ್ಕಾರದ ಬಳಿ ನದೀಮ್ ಮನವಿ ಮಾಡಿಕೊಂಡಿದ್ದಾರೆ.
ನನ್ನ ಗ್ರಾಮಕ್ಕೆ ಉತ್ತಮವಾದ ರಸ್ತೆ ಬೇಕಿದೆ. ಅಲ್ಲದೆ, ಅಡುಗೆ ಅನಿಲವನ್ನು ಒದಗಿಸಿದರೆ, ಅದು ನನಗೆ ಮತ್ತು ನನ್ನ ಗ್ರಾಮಕ್ಕೆ ತುಂಬಾ ನೆರವಾಗಲಿದೆ. ನನ್ನ ಸಹೋದರಿಯರು ಉನ್ನತ ವಿದ್ಯಾಭ್ಯಾಸಕ್ಕೆ ಮುಲ್ತಾನ್‌ಗೆ ಪ್ರಯಾಣಿಸಬೇಕಿದೆ. ಇದ್ದು, ತುಂಬಾ ದೂರವಿದ್ದು, ಒಂದೂವರೆಯಿಂದ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಮಿಯಾನ್ ಚನ್ನು ನಗರದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ, ಅನುಕೂಲವಾಗಲಿದೆ. ಇದು ನನ್ನ ದೊಡ್ಡ ಕನಸು. ಸರ್ಕಾರ ಇಲ್ಲಿ ವಿಶ್ವವಿದ್ಯಾಲಯವನ್ನು ತೆರೆದರೆ ನನ್ನ ಹಳ್ಳಿಗೆ ಮತ್ತು ನೆರೆಹೊರೆಯವರಿಗೆ ಒಂದು ದೊಡ್ಡ ಸಿಹಿ ಸುದ್ದಿಯಾಗುತ್ತದೆ ಎಂದು ನದೀಮ್ ಪಾಕಿಸ್ತಾನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಮಸ್ಯೆಗಳನ್ನು ಪ್ರಸ್ತಾಪಿಸುವುದರ ಜೊತೆಗೆ ನದೀಮ್, ತನಗೆ ಬೆಂಬಲ ನೀಡಿದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ತನ್ನ ತವರು ನೆಲಕ್ಕಾಗಿ ನದೀಮ್ ಮನಸ್ಸು ಮಿಡಿದಿದ್ದು, ಇದನ್ನು ನೋಡಿದ ಪಾಕ್ ಮಂದಿ ನದೀಮ್ಗೆ ಜೈಕಾರ ಹಾಕಿದ್ದಾರೆ. ಸ್ವಾರ್ಥವನ್ನು ಮೆರೆಯದೇ ಹುಟ್ಟಿದ ನೆಲಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ನದೀಮ್ ಉದ್ದೇಶಕ್ಕೆ ಎಲ್ಲರು ಸಲಾಂ ಹೊಡೆದಿದ್ದಾರೆ. ನದೀಮ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ನದೀಮ್ಗೆ ಬಹುಪರಾಕ್ ಎಂದಿದ್ದಾರೆ.
ಅಂದಹಾಗೆ ಅರ್ಷದ್ ನದೀಮ್ ಅವರು 1997, ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಖಾನೇವಾಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ನದೀಮ್ ತನ್ನ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವನು. ತಂದೆ ಮೊಹಮ್ಮದ್ ಅಶ್ರಫ್ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅಶ್ರಫ್ ತನ್ನ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ದೊಡ್ಡ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೆಲವೊಮ್ಮೆ ತಿನ್ನುವುದಕ್ಕೂ ತೊಂದರೆಯಾಗುತ್ತಿತ್ತು. ಅವರು ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದರು.
ಕಡು ಬಡತನದಲ್ಲೂ ಅರ್ಷದ್ ನದೀಮ್ಗೆ ಜಾವೆಲಿನ್ ಎಸೆತದ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ನಿಧಾನವಾಗಿ ಅದರಲ್ಲಿ ತರಬೇತಿಯನ್ನೂ ಪಡೆದರು. ಆದರೆ, ಬಡತನದ ಕಾರಣ ಅರ್ಷದ್ ನದೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣ ಹೊಂದಿರಲಿಲ್ಲ. ಈತನ ಪ್ರತಿಭೆಯನ್ನು ಗುರುತಿಸಿದ ಗ್ರಾಮಸ್ಥರೇ ನದೀಮನನ್ನು ಬೇರೆಡೆ ಸ್ಪರ್ಧೆಗಳಿಗೆ ಕಳುಹಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡು, ಅರ್ಷದ್ ನದೀಮ್ ಹಂತ ಹಂತವಾಗಿ ಬೆಳೆದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಕಿಸ್ತಾನದಿಂದ ಏಳು ಕ್ರೀಡಾಪಟುಗಳು ಮಾತ್ರ ಬಂದಿದ್ದರು. ಅವರಲ್ಲಿ ಅರ್ಷದ್ ನದೀಮ್ ಕೂಡ ಒಬ್ಬರು. ಆದಾಗ್ಯೂ, ಸುಮಾರು 32 ವರ್ಷಗಳ ನಂತರ ಅವರು ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕವಾಗಿದೆ. ಅದಕ್ಕೂ ಮುನ್ನ 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ. (ಏಜೆನ್ಸೀಸ್)