ಕ್ರೀಡೆ

ಆಂಡಿ ಮರ‌್ರೆ, ಕಿಮ್ ಕ್ಲೈಸ್ಟರ್ಸ್‌ಗೆ ಯುಎಸ್ ಓಪನ್ ವೈಲ್ಡ್ ಕಾರ್ಡ್

ನ್ಯೂಯಾರ್ಕ್: ಮಾಜಿ ಚಾಂಪಿಯನ್‌ಗಳಾದ ಬ್ರಿಟನ್ ತಾರೆ ಆಂಡಿ ಮರ‌್ರೆ ಮತ್ತು ಬೆಲ್ಜಿಯಂ ತಾರೆ ಕಿಮ್ ಕ್ಲೈಸ್ಟರ್ಸ್‌ಗೆ ಮುಂಬರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಕಟ್ಟುನಿಟ್ಟಿನ ಆರೋಗ್ಯ ಮಾರ್ಗಸೂಚಿಯ ನಡುವೆ ಯುಎಸ್ ಓಪನ್ ಆಗಸ್ಟ್ 31ರಿಂದ ನಡೆಯಲಿದೆ.

ಮಾಜಿ ವಿಶ್ವ ನಂ. 1 ಆಂಡಿ ಮರ‌್ರೆ ಈಗ 129ನೇ ರ‌್ಯಾಂಕ್‌ಗೆ ಕುಸಿತ ಕಂಡಿದ್ದಾರೆ. ಗಾಯದಿಂದಾಗಿ ಅವರು ಸುದೀರ್ಘ ಕಾಲ ವಿಶ್ರಾಂತಿಯಲ್ಲಿ ಕಾರಣದಿಂದಾಗಿ ನೇರಪ್ರವೇಶ ತಪ್ಪಿಸಿಕೊಂಡಿದ್ದರು. 33 ವರ್ಷದ ಅವರು 2012ರಲ್ಲಿ ಯುಎಸ್ ಓಪನ್‌ನಲ್ಲೇ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡಿದ್ದರು.

2ನೇ ಬಾರಿ ನಿವೃತ್ತಿ ಹಿಂಪಡೆದು ಟೆನಿಸ್ ಕೋರ್ಟ್‌ಗೆ ಮರಳುತ್ತಿರುವ 3 ಮಕ್ಕಳ ತಾಯಿ ಕಿಮ್ ಕ್ಲೈಸ್ಟರ್ಸ್‌, 2009ರ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಪ್ರಶಸ್ತಿ ಜಯಿಸಿದ ಸಾಧನೆಯನ್ನು ಪುನರಾವರ್ತಿಸುವ ಹಂಬಲದಲ್ಲಿದ್ದಾರೆ. 37 ವರ್ಷದ ಕಿಮ್ ಕ್ಲೈಸ್ಟರ್ಸ್‌ ಯುಎಸ್ ಓಪನ್‌ನಲ್ಲಿ ಒಟ್ಟು 3 ಬಾರಿ ಪ್ರಶಸ್ತಿ ಜಯಿಸಿದ್ದಾರೆ. 2012ರ ಟೂರ್ನಿ ಬಳಿಕ ಅವರು ಇದೇ ಮೊದಲ ಬಾರಿಗೆ ಇಲ್ಲಿ ಕಣಕ್ಕಿಳಿಯಲಿದ್ದಾರೆ.