ಕ್ರೀಡೆ

ಅವಧ್ ವಾರಿಯರ್ಸ್​ಗೆ ಶರಣಾದ ಮುಂಬೈ ರಾಕೆಟ್ಸ್

ಲಖನೌ: ನಿರ್ಣಾಯಕ ಟ್ರಂಪ್ ಹಣಾಹಣಿಯಲ್ಲಿ ಅನುಭವಿ ಷಟ್ಲರ್ ಪಿ.ಕಶ್ಯಪ್ ನಿರಾಸೆ ಅನುಭವಿಸಿದ ಪರಿಣಾಮ ಹಾಲಿ ರನ್ನರ್​ಅಪ್ ಮುಂಬೈ ರಾಕೆಟ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿತು. ಯುಪಿ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ, ಇನ್ನೂ ಎರಡು ಹಣಾಹಣಿ ಬಾಕಿ ಇರುವಾಗಲೇ 0-3ರಿಂದ ಅವಧ್ ವಾರಿಯರ್ಸ್ ತಂಡಕ್ಕೆ ಶರಣಾಯಿತು.

ಪಂದ್ಯದ ಮೊದಲ ಹಣಾಹಣಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಜಯ ದಾಖಲಿಸಿದ ಮುಂಬೈ ಆರಂಭಿಕ ಮುನ್ನಡೆ ಕಂಡುಕೊಂಡಿತು. ಬಳಿಕ ಮಹಿಳೆಯರ ಸಿಂಗಲ್ಸ್ ವಿಭಾಗವನ್ನು ಟ್ರಂಪ್ ಘೋಷಣೆಯೊಂದಿಗೆ ಆಡಿದ ಅವಧ್ ವಾರಿಯರ್ಸ್ ತಂಡದ ವಿಶ್ವ ನಂ.11 ಬೀವೆನ್ ಜಾಂಗ್ 15-3, 15-4ರಿಂದ ಕುಹೂ ಗಾರ್ಗ್ ಎದುರು ಜಯ ದಾಖಲಿಸಿದರು. ಇದರಿಂದ ಮುಂಬೈ ತಂಡ 1-2ರಿಂದ ಹಿನ್ನಡೆ ಕಂಡಿತು. ಬಳಿಕ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಹಣಾಹಣಿಯಲ್ಲಿ ಟ್ರಂಪ್ ಘೋಷಣೆಯೊಂದಿಗೆ ಆಡಿದ ಮುಂಬೈ ತಂಡದ ಕಶ್ಯಪ್ 8-15, 10-15 ರಿಂದ ಆವಧ್​ನ ವಾಂಗ್ ವಿಂಗ್ ವಿನ್ಸೆಂಟ್​ಗೆ ಶರಣಾದರು. ಇದರಿಂದ ಅಂಕ ಕಳೆದುಕೊಂಡ ಮುಂಬೈ ತಂಡ 0-3ರಿಂದ ಸೋಲು ಕಂಡಿತು. ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಕೊನೇ 2 ಪಂದ್ಯಗಳಾಗಿವೆ.

ಇಂದಿನ ಪಂದ್ಯ

ಆರಂಭ: ರಾತ್ರಿ 7 ಸ್ಥಳ: ಹೈದರಾಬಾದ್ ಹೈದರಾಬಾದ್ V/S ನಾರ್ತ್ ಈಸ್ಟರ್ನ್ ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್