ಕ್ರೀಡೆ

ಮುಂಬೈ ಇಂಡಿಯನ್ಸ್ ಎದುರು ನಿರಾಸೆ ಅನುಭವಿಸಿದ ಆರ್‌ಸಿಬಿ, ಪ್ಲೇ-ಆಫ್ ಬಹುತೇಕ ಖಚಿತಪಡಿಸಿಕೊಂಡ ಹಾಲಿ ಚಾಂಪಿಯನ್

ಅಬುಧಾಬಿ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 12ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿತು. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ, ಕೈರಾನ್ ಪೊಲ್ಲಾರ್ಡ್ ಬಳಗಕ್ಕೆ 5 ವಿಕೆಟ್‌ಗಳಿಂದ ಶರಣಾಯಿತು. ಲೀಗ್‌ನಲ್ಲಿ 8ನೇ ಗೆಲುವು ದಾಖಲಿಸಿದ ಮುಂಬೈ ಪ್ಲೇಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡರೆ, ಆರ್‌ಸಿಬಿ ಸತತ 2ನೇ ಸೋಲಿನ ನಡುವೆ 2ನೇ ಸ್ಥಾನದಲ್ಲೇ ಉಳಿಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ (74 ರನ್, 45 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಜೋಶ್ ಫಿಲಿಪ್ (33 ರನ್, 24 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಆರಂಭ ನೀಡಿದರೂ, ಸ್ಲಾಗ್ ಓವರ್‌ಗಳಲ್ಲಿ ಜಸ್‌ಪ್ರಿತ್ ಬುಮ್ರಾ (14ಕ್ಕೆ 3) ದಾಳಿಗೆ ನಲುಗಿ 6 ವಿಕೆಟ್‌ಗೆ 164 ರನ್ ಕಲೆಹಾಕಿತು. ಪ್ರತಿಯಾಗಿ ಸೂರ್ಯಕುಮಾರ್ ಯಾದವ್ (79*ರನ್, 43ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್‌ಗಳಿಸಿ ಗೆಲುವಿನ ನಗೆ ಬೀರಿತು.