ಅಬುಧಾಬಿ: ಸತತ ನಾಲ್ಕು ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡವನ್ನು ಎದುರಿಸಲಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ರೋಹಿತ್ ಶರ್ಮ ಪಡೆಯೇ ಫೇವರಿಟ್ ಎನಿಸಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು 82 ರನ್‌ಗಳಿಂದ ಸೋತಿರುವ ಕೆಕೆಆರ್ ತಂಡವನ್ನು ಅಸ್ಥಿರ ನಿರ್ವಹಣೆ ಕಾಡುತ್ತಿದೆ. ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ 49 ರನ್‌ಗಳಿಂದ ಜಯ ದಾಖಲಿಸಿತ್ತು.
*ಆತ್ಮವಿಶ್ವಾಸದಲ್ಲಿ ಮುಂಬೈ
ಲೀಗ್ ಇತಿಹಾಸದಲ್ಲಿ ಕೆಕೆಆರ್ ಎದುರು ಹೆಚ್ಚು ಪ್ರಭುತ್ವ ಸಾಧಿಸಿರುವ ಮುಂಬೈ ತಂಡ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ರೋಹಿತ್ ಶರ್ಮ, ಸೂರ್ಯಕುಮಾರ್, ಕ್ವಿಂಟನ್ ಡಿಕಾಕ್ ಅಗ್ರ ಕ್ರಮಾಂಕದಲ್ಲಿ ಗಮನಾರ್ಹ ನಿರ್ವಹಣೆ ತೋರುತ್ತಿದ್ದರೆ, ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್ ಹಾಗೂ ಪಾಂಡ್ಯ ಸಹೋದರರು ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದಾರೆ. ಅದೇ ರೀತಿ ರಾಹುಲ್ ಚಹರ್ ಹಾಗೂ ಕೃನಾಲ್ ಪಾಂಡ್ಯ ಜೋಡಿ ಪ್ರಬಲ ಸ್ಪಿನ್ ಅಸವಾಗಿದೆ. ಜೇಮ್ಸ್ ಪ್ಯಾಟಿನ್‌ಸನ್ ಹಾಗೂ ಟ್ರೆಂಟ್ ಬೌಲ್ಟ್ ವೇಗದ ವಿಭಾಗದಲ್ಲಿ ಶಕ್ತಿಯಾಗಿದ್ದಾರೆ.
*ಕೆಕೆಆರ್‌ಗೆ ದಿಢೀರ್ ಕುಸಿತದ ಭೀತಿ
ಕಳೆದ 3 ಪಂದ್ಯಗಳ ಪೈಕಿ 2ರಲ್ಲಿ ಅನಿರೀಕ್ಷಿತ ಜಯ ದಾಖಲಿಸಿದ ಕೆಕೆಆರ್, ಅಂತಿಮವಾಗಿ ಆರ್‌ಸಿಬಿ ಎದುರು ಹೀನಾಯವಾಗಿ ಸೋಲು ಕಂಡಿತು. ಇದಕ್ಕೂ ಮೊದಲು ಸಿಎಸ್‌ಕೆ ಹಾಗೂ ಕಿಂಗ್ಸ್ ಇಲೆವೆನ್ ಎದುರು ರೋಚಕ ಜಯ ದಾಖಲಿಸಿತ್ತು. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 4 ಜಯ, 3 ಸೋಲು ಕಂಡಿರುವ ಕೆಕೆಆರ್ ತಂಡಕ್ಕೆ ಉತ್ತಮ ಆರಂಭದ ಕೊರತೆ ಕಾಡುತ್ತಿದೆ. ಜತೆಗ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದ ಆಂಡ್ರೆ ರಸೆಲ್, ಇದುವರೆಗೆ 71 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಶುಭಮಾನ್ ಗಿಲ್ ರನ್‌ಗಳಿಸುತ್ತಿದ್ದರೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿಲ್ಲ. ಇವೊಯಿನ್ ಮಾರ್ಗನ್, ನಿತೀಶ್ ರಾಣಾ, ನಾಯಕ ದಿನೇಶ್ ಕಾರ್ತಿಕ್‌ರಿಂದಲೂ ಉತ್ತಮ ನಿರ್ವಹಣೆ ಕಂಡು ಬರುತ್ತಿಲ್ಲ.
ಟೀಮ್ ನ್ಯೂಸ್:
ಮುಂಬೈ ಇಂಡಿಯನ್ಸ್: ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇದರಿಂದ ಸತತ 6ನೇ ಪಂದ್ಯದಲ್ಲಿ ಒಂದೇ ತಂಡ ಕಣಕ್ಕಿಳಿದಂತಾಗುತ್ತದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.
ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಜಯ.
ಕೋಲ್ಕತ ನೈಟ್‌ರೈಡರ್ಸ್: ಕನಿಷ್ಠ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯಬಹುದು. ಸುನೀಲ್ ನಾರಾಯಣ್‌ರನ್ನು ವಾಪಸ್ ಕರೆತಂದರೆ, ಟಾಮ್ ಬ್ಯಾಂಟನ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಕಡೇ ನಾಲ್ಕು ಪಂದ್ಯಗಳಿಂದ ಹೊರಗುಳಿದಿರುವ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ಆರ್‌ಸಿಬಿ ಎದುರು ದಂಡನೆಗೆ ಒಳಗಾಗಿದ್ದ ವರುಣ್ ಚಕ್ರವರ್ತಿ ಬದಲಿಗೆ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಸಂಭಾವ್ಯ ತಂಡ: ಸುನೀಲ್ ನಾರಾಯಣ್/ಟಾಮ್ ಬಾಂಟನ್, ಶುಭಮಾನ್ ಗಿಲ್, ನಿತೀಶ್ ರಾಣಾ, ಇವೊಯಿನ್ ಮಾರ್ಗನ್, ದಿನೇಶ್ ಕಾರ್ತಿಕ್ (ನಾಯಕ/ವಿಕೀ), ಆಂಡ್ರೆ ರಸೆಲ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ/ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ.
ಕಳೆದ ಪಂದ್ಯ: ಆರ್‌ಸಿಬಿ ಎದುರು 82 ರನ್‌ಗಳಿಂದ ಸೋಲು.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 26, ಮುಂಬೈ ಇಂಡಿಯನ್ಸ್: 20, ಕೆಕೆಆರ್: 6.