ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡಕ್ಕೆ ಡೆಲ್ಲಿ ಸವಾಲು

ಅಬುಧಾಬಿ: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-13ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಎದುರಾಗಲಿವೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಗ್ರಸ್ಥಾನಕ್ಕೂ ಪೈಪೋಟಿ ಏರ್ಪಡಲಿದೆ. ಡೆಲ್ಲಿ ಗೆದ್ದರೆ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಮುಂಬೈ ಗೆದ್ದರೆ ಉತ್ತಮ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಉಭಯ ತಂಡಗಳು, ಲೀಗ್‌ನಲ್ಲಿ ಇದುವರೆಗೆ ಸ್ಥಿರ ನಿರ್ವಹಣೆಯಿಂದ ಗಮನಸೆಳೆದಿವೆ. ಉಭಯ ತಂಡಗಳೂ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿದ್ದು, ಜಿದ್ದಾಜಿದ್ದಿನ ಕಾದಾಟ ನಡೆಯುವ ನಿರೀಕ್ಷೆ ಇದೆ. ಲೀಗ್ ಇತಿಹಾಸದಲ್ಲಿ ಮುಂಬೈ-ಡೆಲ್ಲಿ ಸಮಬಲ ಸಾಧಿಸಿವೆ. ಉದ್ಘಾಟನಾ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಗೆಲುವಿನ ಹಳಿಗೇರಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಉತ್ತಮ ಲಯ ಕಂಡುಕೊಳ್ಳಲು ಯಶಸ್ವಿಯಾಗಿದ್ದರೆ, ಡೆಲ್ಲಿ ಸತತ ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ.

ಬಹುತೇಕ ಅನುಭವಿ ಪಡೆಯನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ, ಆರಂಭಿಕರ ಅಸ್ಥಿರತೆ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಪಾಂಡ್ಯ ಸಹೋದರರ, ಇಶನ್ ಕಿಶನ್, ಕೈರಾನ್ ಪೊಲ್ಲಾರ್ಡ್ ಒಳಗೊಂಡ ಮಧ್ಯಮ ಕ್ರಮಾಂಕದ ಬಲಿಷ್ಠವಾಗಿದೆ. ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಜೋಡಿ ಮೋಡಿ ಮಾಡುತ್ತಿದೆ. ಮತ್ತೊಂದೆಡೆ, ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ ಸಿಡಿಯುತ್ತಿದ್ದರೆ, ಶಿಖರ್ ಧವನ್ ಅವರಿಂದ ದೊಡ್ಡ ಇನಿಂಗ್ಸ್ ಬರುತ್ತಿಲ್ಲ ಶ್ರೇಯಸ್ ಅಯ್ಯರ್ ಜತೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಹೆಟ್ಮೆಯರ್ ಫಾರ್ಮ್ಗೆ ಮರಳಿರುವುದು ಸಮಾಧಾನಕರ ಸಂಗತಿ. ರಬಾಡ, ಅನ್ರಿಚ್ ನೋರ್ಜೆ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

ಟೀಮ್ ನ್ಯೂಸ್:

ಮುಂಬೈ ಇಂಡಿಯನ್ಸ್: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಕಡಿಮೆ. ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಬಹುದು.

ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾನ್ (ವಿಕೀ), ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್‌ಸನ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 57 ರನ್ ಜಯ.

ಡೆಲ್ಲಿ ಕ್ಯಾಪಿಟಲ್ಸ್: ಸತತ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಡೆಲ್ಲಿ ತಂಡ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಬಹುದು. ಅನುಭವಿ ಇಶಾಂತ್ ಶರ್ಮಗೆ ಮಣೆ ಹಾಕಿದರೆ, ಹರ್ಷಲ್ ಪಟೇಲ್ ಹೊರಗುಳಿಬಹುದು.

ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಶಿಮ್ರೋನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್, ಆರ್.ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ.

ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 46 ರನ್ ಜಯ.

ಪಂದ್ಯ ಆರಂಭ : ರಾತ್ರಿ : 7.30ಕ್ಕೆ 

ಮುಖಾಮುಖಿ: 24, ಮುಂಬೈ ಇಂಡಿಯನ್ಸ್: 12, ಡೆಲ್ಲಿ ಕ್ಯಾಪಿಟಲ್ಸ್: 12