ಮುಂಬೈ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಸಹಿತ ಸ್ಟಾರ್ ಆಟಗಾರರ ಬಲ ಹೊಂದಿದ್ದ ನಡುವೆಯೂ ಹಾಲಿ ಮತ್ತು 42 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡ ಜಮ್ಮು-ಕಾಶ್ಮೀರ ವಿರುದ್ಧದ ಲೀಗ್ ಪಂದ್ಯದಲ್ಲಿ 5 ವಿಕೆಟ್ಗಳಿಂದ ಪರಾಭವಗೊಂಡಿದೆ. ಇದರಿಂದ ಎ ಗುಂಪಿನಿಂದ ನಾಕೌಟ್ ಹಂತಕ್ಕೇರುವ ಮುಂಬೈ ತಂಡದ ಆಸೆಗೆ ಹೊಡೆತ ಬಿದ್ದಿದೆ.
ಶಾರ್ದೂಲ್ ಠಾಕೂರ್ (119) ಶತಕದ ನಡುವೆ 2ನೇ ಇನಿಂಗ್ಸ್ನಲ್ಲಿ 290 ರನ್ಗಳಿಗೆ ಆಲೌಟ್ ಆದ ಮುಂಬೈ, ಜಮ್ಮು-ಕಾಶ್ಮೀರಕ್ಕೆ 205 ರನ್ ಗುರಿ ನೀಡಿತು. ಪ್ರತಿಯಾಗಿ ಸಂಟಿತ ಬ್ಯಾಟಿಂಗ್ನಿಂದ ಜಮ್ಮು-ಕಾಶ್ಮೀರ 49 ಓವರ್ಗಳಲ್ಲಿ 5 ವಿಕೆಟ್ಗೆ 207 ರನ್ ಗಳಿಸಿ ಜಯಿಸಿತು. ಸ್ಪಿನ್ನರ್ ಶಮ್ಸ್ ಮುಲಾನಿ (54ಕ್ಕೆ 4) ಹೊರತಾಗಿ ಮುಂಬೈನ ಇತರ ಬೌಲರ್ಗಳು ಪರಿಣಾಮಕಾರಿ ಎನಿಸಲಿಲ್ಲ.