ಕ್ರೀಡೆ

ಪ್ಲೇಆಫ್ ಹಂತಕ್ಕೇರಲು ಮುಂಬೈ ಮುಂದಿರುವ ದೊಡ್ಡ ಸವಾಲು ಏನು ಗೊತ್ತೇ?

ಅಬುಧಾಬಿ: ಪ್ಲೇಆಫ್ ಹಂತಕ್ಕೇರಲು ಬೃಹತ್ ಗೆಲುವು ಕಾಣಬೇಕಾದ ಒತ್ತಡದಲ್ಲಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ತನ್ನ ಕಡೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಶುಕ್ರವಾರ ಎದುರಿಸಲಿದೆ. ಅಬುಧಾಬಿಯ ಶೇಖ್ ಜಯೇದ್ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ಭಾರಿ ಮಹತ್ವ ಪಡೆದಿದೆ. 13 ಪಂದ್ಯಗಳಿಂದ 12 ಅಂಕಗಳಿಸಿರುವ ಮುಂಬೈ ತಂಡ ಮೈನಸ್ ರನ್ ರೇಟ್ ಹೊಂದಿದೆ. ಹೀಗಾಗಿ ರೋಹಿತ್ ಶರ್ಮ ಬಳಗಕ್ಕೆ ಕೇವಲ ಗೆಲುವೊಂದೇ ಮಾರ್ಗವಲ್ಲ, ರನ್‌ರೇಟ್ ಲೆಕ್ಕಾಚಾರದಲ್ಲೂ ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸಬೇಕಿದೆ. ರಾಜಸ್ಥಾನ ವಿರುದ್ಧ ಕಡೇ ಲೀಗ್ ಪಂದ್ಯದಲ್ಲಿ ಕೆಕೆಆರ್ ಜಯಿಸಿರುವುದರಿಂದ ಮುಂಬೈ ತಂಡ ಬೃಹತ್ ಗೆಲುವಿನೊಂದಿಗೆ ರನ್‌ರೇಟ್ ಲೆಕ್ಕಾಚಾರದಲ್ಲೂ ಮಾರ್ಗನ್ ಬಳಗವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರೆ ಮಾತ್ರ ಪ್ಲೇಆಫ್ ಹಂತಕ್ಕೇರಿ ಪ್ರಶಸ್ತಿ ಆಸೆ ಜೀವಂತ ಉಳಿಸಿಕೊಳ್ಳಲಿದೆ.

ಮತ್ತೊಂದೆಡೆ, ಲೀಗ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿರುವ ಸನ್‌ರೈಸರ್ಸ್‌ ತಂಡ ಕಡೇ ಪಂದ್ಯದಲ್ಲಿ ಜಯ ದಾಖಲಿಸಿ ಲೀಗ್‌ಗೆ ವಿದಾಯ ಹೇಳುವ ಕನಸಿನಲ್ಲಿದೆ. ಬುಧವಾರ ಆರ್‌ಸಿಬಿ ಎದುರು ರೋಚಕ ಗೆಲುವು ದಾಖಲಿಸಿದ ಕೇನ್ ವಿಲಿಯಮ್ಸನ್ ಪಡೆ ಉತ್ತಮ ನಿರ್ವಹಣೆಯತ್ತ ದೃಷ್ಟಿ ಹರಿಸಿದೆ.

ಮುಖಾಮುಖಿ: 17, ಮುಂಬೈ: 9, ಸನ್‌ರೈಸರ್ಸ್‌: 8

ಹಿಂದಿನ ಮುಖಾಮುಖಿ: ಮುಂಬೈಗೆ 13 ರನ್ ಜಯ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್