ಕ್ರೀಡೆ

ಧೋನಿ ಅವರ ಕಡೆಯ... 'ಕ್ಯಾಪ್ಟನ್ ಕೂಲ್' ಐಪಿಎಲ್ ಭವಿಷ್ಯದ ಬಗ್ಗೆ ಕಡೆಗೂ ಮೌನ ಮುರಿದ CSK ಸಿಇಓ | MS Dhoni

ತಮಿಳುನಾಡು: ಐದು ಬಾರಿ ಐಪಿಎಲ್​ ಚಾಂಪಿಯನ್ಸ್ ಆಗಿ ಹೊರಹೊಮ್ಮುವುದಲ್ಲದೇ, ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಬಲಿಷ್ಠ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಇದೀಗ ಆನೆಬಲ ಮರಳಿ ಬಂದಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್​ ಪಟ್ಟಿಯಡಿ 4 ಕೋಟಿ ರೂ.ಗೆ ಸಿಎಸ್​ಕೆಯಲ್ಲಿ ಉಳಿದುಕೊಂಡ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಈ ಮೂಲಕ ತಾವು 18ನೇ ಆವೃತ್ತಿಯಲ್ಲಿ ತಂಡಕ್ಕೋಸ್ಕರ ಮತ್ತು ಅಭಿಮಾನಿಗಳಿಗಾಗಿ ಆಡಲು ದೃಢವಾಗಿ ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ವಿಷಯ ಗೊತ್ತಾಗ್ತಿದ್ದಂತೆ ಅವರ ಫ್ಯಾನ್ಸ್​ಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ತಮ್ಮ ನೆಚ್ಚಿನ 'ಕ್ಯಾಪ್ಟನ್ ಕೂಲ್'​ರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡುವ ಭಾಗ್ಯ ದೊರಕಿತು ಎಂದು ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ, ಈ ಮಧ್ಯೆ ಎಂ.ಎಸ್​. ಧೋನಿ (MS Dhoni) ಅವರ ಐಪಿಎಲ್ ಭವಿಷ್ಯದ ಬಗ್ಗೆ ಫ್ರಾಂಚೈಸಿಯ ಸಿಇಓ ಕಾಶಿ ವಿಶ್ವನಾಥನ್ ಕಡೆಗೂ ಮೌನ ಮುರಿದಿದ್ದಾರೆ.

ಒಗ್ಗಟು, ಉತ್ಸಾಹ

ಚೆನ್ನೈ ಸೂಪರ್ ಕಿಂಗ್ಸ್ ಪರ ಯಾವ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ ಎಂಬುದನ್ನು ರಿಟೆನ್ಶನ್ ಪ್ರಕ್ರಿಯೆಗೂ ಮುನ್ನ ನಿಖರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಆದರೆ, ತಂಡವನ್ನು ಐದು ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಹಾಗೂ ತಂಡದಲ್ಲಿ ಒಗ್ಗಟು, ಆಟಗಾರರಲ್ಲಿ ಉತ್ಸಾಹ ತುಂಬುವ ಶಕ್ತಿಯಾಗಿರುವ ಎಂಎಸ್ ಧೋನಿ ಅವರನ್ನು ಐಪಿಎಲ್ 2025ರ ಹರಾಜಿಗೆ ಕಳಿಸದೆ, ಫ್ರಾಂಚೈಸಿ ಅನ್​ಕ್ಯಾಪ್ಡ್​ ಪ್ಲೇಯರ್​ ಪಟ್ಟಿಯಡಿ ಅವರನ್ನು ಉಳಿಸಿಕೊಂಡಿತು. ಅವರ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್​ (18 ಕೋಟಿ ರೂ.), ರವೀಂದ್ರ ಜಡೇಜಾ (18 ಕೋಟಿ ರೂ.), ಮತೀಶಾ ಪತಿರಾಣ (13 ಕೋಟಿ ರೂ.) ಮತ್ತು ಶಿವಂ ದುಬೆರನ್ನು (12ಕೋಟಿ ರೂ.) ಉಳಿಸಿಕೊಂಡಿತು. ಸದ್ಯ ಮತ್ತೊಂದು ಆವೃತ್ತಿ ಆಡಲು ಕಣಕ್ಕಿಳಿಯಲು ಸಜ್ಜಾಗಿರುವ ಧೋನಿ ಅವರ ನಿಲುವೇನು? ಎಂಬುದರ ಬಗ್ಗೆ ಸಿಎಸ್​ಕೆ ಸಿಇಓ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಕೊನೆಯ ಪಂದ್ಯ

ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಟಿ ರಾಯಡು ಜತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಕಾಶಿ, “ಎಲ್ಲರಿಗೂ ಗೊತ್ತಿರುವಂತೆ ಮಾಹಿ ಯಾವುದನ್ನು ಅಷ್ಟು ಸುಲಭವಾಗಿ ಯಾರಿಗೂ ಬಿಟ್ಟುಕೊಡುವುದಿಲ್ಲ. ಆ ವಿಷಯವನ್ನು ಅವರೇ ಖುದ್ದಾಗಿ ಹೇಳುವವರೆಗೂ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಿಎಸ್​ಕೆ ಪರ ಆಡುತ್ತೇನೆ ಎಂದು ನಿರ್ಧರಿಸಿ ಬಂದಿರುವುದು ನಿಜಕ್ಕೂ ಖುಷಿಯ ಸಂಗತಿ ಹಾಗೂ ಸ್ವಾಗತಾರ್ಹ. ಈ ಹಿಂದೆಯೇ ಅವರು ಹೇಳಿರುವಂತೆ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸಿದ್ದಾರೆ. ಅದರಂತೆಯೇ ನಾವು ಕೂಡ ಅದಕ್ಕೆ ಹೆಚ್ಚು ಒತ್ತು ನೀಡಲಿದ್ದೇವೆ. ಎಲ್ಲಿಯವರೆಗೂ ಕ್ಯಾಪ್ಟನ್ ಕೂಲ್​ಗೆ ಚೆನ್ನೈನಲ್ಲಿ ಆಡಬೇಕು ಅನಿಸುತ್ತದೆಯೋ, ಅಲ್ಲಿಯವರೆಗೂ ಅವರು ಆಡಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ" ಎಂದರು.

ನಿರ್ಧಾರದ ಮೇಲೆ ವಿಶ್ವಾಸ

"ಧೋನಿ ಅವರ ನಿಲುವು ಮತ್ತು ಫ್ರಾಂಚೈಸಿಯೊಂದಿಗೆ ಇರುವ ಬಾಂಧವ್ಯ ನೋಡಿ ಹೇಳುವುದಾದರೆ, ನಮಗೆ 'ಕ್ಯಾಪ್ಟನ್ ಕೂಲ್' ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಮೇಲೆ ಅಪಾರ ವಿಶ್ವಾಸವಿದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ. ಸದ್ಯದ ಮಟ್ಟಿಗೆ ಧೋನಿ ಸಿಎಸ್​ಕೆ ಪರ ಆಡಲು ಬಯಸಿದ್ದಾರೆ. ಇಲ್ಲಿಯೇ ಮುಂದುವರಿಯಲಿದ್ದಾರೆ ಎಂಬ ಭಾವನೆ ನನಗಿದೆ. ಅವರು ಯಾವಾಗ ಆಡಲು ಇಚ್ಛಿಸುತ್ತಾರೋ,  ಸಿಎಸ್​ಕೆ ಬಾಗಿಲು ಸದಾ ಅವರಿಗಾಗಿ ತೆರೆದಿರುತ್ತದೆ" ಎಂದು ಮನಬಿಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).