ಕ್ರೀಡೆ

ವಿಂಟೇಜ್ ರೋಲ್ಸ್ ರಾಯ್ಸ್​ ಕಾರು ಏರಿ ಧೋನಿ ಸವಾರಿ: ಕ್ರೇಜಿ ಫ್ಯಾನ್ಸ್​ ಏನ್​ ಮಾಡಿದ್ರು ನೋಡ್ರಿ... MS Dhoni

MS Dhoni : ಭಾರತೀಯ ಕ್ರಿಕೆಟ್​ ಇತಿಹಾಸದ ದಂತಕತೆಗಳಲ್ಲಿ ಕೂಲ್​ ಕ್ಯಾಪ್ಟನ್​ ಎಂದೇ ಖ್ಯಾತಿ ಪಡೆದ ಎಂ.ಎಸ್​. ಧೋನಿ ಕೂಡ ಒಬ್ಬರು. ಧೋನಿ ಸೃಷ್ಟಿಸಿರುವ ದಾಖಲೆಗಳನ್ನು ಭಾರತೀಯರಾದ ನಾವು ಎಂದಿಗೂ ಮರೆಯುವುದಿಲ್ಲ. ಟೀಮ್​ ಇಂಡಿಯಾದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಯಾರಾದರೂ ಇದ್ದರೆ ಅದು ಎಂಎಸ್ ಧೋನಿ ಮಾತ್ರ. ಕ್ರಿಕೆಟ್​ ಲೋಕದ ರಾಜನಾಗಿ ಮೆರೆದ ಧೋನಿ, ನಿವೃತ್ತಿಯ ಬಳಿಕ ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಅಂದಹಾಗೆ, ಧೋನಿ ಅವರಿಗೆ ಕ್ರಿಕೆಟ್​ ಹೊರತಾಗಿ ಕಾರು ಮತ್ತು ಬೈಕ್​ಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್​ ಇರುವುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮನೆಯಲ್ಲಿ ಸಾಕಷ್ಟು ಕಾರು ಮತ್ತು ಬೈಕ್​ಗಳ ಸಂಗ್ರಹವೂ ಇದೆ. ತಮ್ಮಿಷ್ಟದ ವಾಹನ ಏರಿ ಆಗಾಗ ರಾಂಚಿ ರಸ್ತೆಗಳಲ್ಲಿ ಧೋನಿ ಸವಾರಿ ಮಾಡಿದ ಸಾಕಷ್ಟು ವಿಡಿಯೋಗಳನ್ನು ಈಗಾಗಲೇ ನೋಡಿದ್ದೇವೆ. ಈಗ ಆ ಪಟ್ಟಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಹೌದು, ಈ ಬಾರಿ ಧೋನಿ ಅವರು ವಿಂಟೇಜ್​ ಕಾರಿನಲ್ಲಿ ಸವಾರಿ ಮಾಡಿದ್ದಾರೆ.

ಧೋನಿ ಅವರು ತಮ್ಮ 1980ರ ವಿಂಟೇಜ್ ರೋಲ್ಸ್ ರಾಯ್ಸ್​ ಸಿಲ್ವರ್ ಶ್ಯಾಡೋ II ಕಾರನ್ನು ರಾಂಚಿ ರಸ್ತೆಯಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀಲಿ ಬಣ್ಣದ ಉಡುಪು ಧರಿಸಿ ತಮ್ಮ ಮನೆಯಿಂದ ವಿಂಟೇಜ್​ ಕಾರು ಏರಿ ಧೋನಿ ಹೊರಬರುತ್ತಾರೆ. ಈ ವೇಳೆ ಓರ್ವ ಯುವ ಅಭಿಮಾನಿ ಕಾರಿನ ಕಿಟಕಿ ಗಾಜಿನ ಬಳಿ ಬಂದು ಧೋನಿಯ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಇನ್ನೊಬ್ಬ ಅಭಿಮಾನಿ ಧೋನಿ ಫೋಟೋವನ್ನು ಕ್ಲಿಕ್ಕಿಸಲು ಪ್ರಯತ್ನಿಸುತ್ತಾನೆ. ಆದರೆ, ಅವರು ಕಾರು ನಿಲ್ಲಿಸದೇ ಅಲ್ಲಿಂದ ಹೋಗುವ ದೃಶ್ಯ ವೈರಲ್​ ವಿಡಿಯೋದಲ್ಲಿದೆ.

ಅಂದಹಾಗೆ, ಧೋನಿ ಅವರ ಈ ಸವಾರಿ ಅವರ ದೈನಂದಿನ ಜೀವನಶೈಲಿಯನ್ನು ತೋರಿಸುತ್ತದೆ. ಅವರು ಈ ಹಿಂದೆ ಹೇಳಿದಂತೆ, "ಒತ್ತಡ ಇದ್ದಾಗ ನನ್ನ ಬೈಕ್ ಮತ್ತು ವಿಂಟೇಜ್ ಕಾರು ಗ್ಯಾರೇಜ್‌ಗೆ ಹೋಗಿ ಕೆಲವು ಗಂಟೆಗಳ ಕಾಲ ಕಳೆಯುತ್ತೇನೆ. ಅದು ನನ್ನನ್ನು ರಿಲ್ಯಾಕ್ಸ್ ಮಾಡುತ್ತದೆ ಎಂದು ಹೇಳಿದ್ದರು.

ವಾಹನಗಳ ಮೇಲೆ ಧೋನಿ ಪ್ರೀತಿ

ಧೋನಿ ಅವರಿಗೆ ವಾಹನಗಳೆಂದರೆ ತುಂಬಾ ಪ್ರೀತಿ. ಅವರ ಗ್ಯಾರೇಜ್‌ನಲ್ಲಿ ಒಟ್ಟು 15ಕ್ಕೂ ಹೆಚ್ಚು ಕಾರುಗಳಿವೆ. ಅಲ್ಲದೆ, 70ಕ್ಕೂ ಹೆಚ್ಚು ಬೈಕ್‌ಗಳಿವೆ. ಅವರು ಹುಮ್ಮರ್ H2 (75 ಲಕ್ಷ ರೂ.), ಫೆರಾರಿ 599 GTO (3 ಕೋಟಿ ರೂ.ಗೂ ಅಧಿಕ), ಆಡಿ Q7 ಸೇರಿದಂತೆ ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ. ಆದರೆ ವಿಂಟೇಜ್ ಕಾರುಗಳೆಂದರೆ ಧೋನಿಗೆ ತುಂಬಾ ಇಷ್ಟ.

2023ರಲ್ಲಿ ವೆಂಕಟೇಶ್ ಪ್ರಸಾದ್ ಅವರು ಧೋನಿಯ ಗ್ಯಾರೇಜ್ ಟೂರ್ ವಿಡಿಯೋ ಶೇರ್ ಮಾಡಿದ್ದರು. ಈ ವೇಳೆ ಸಾಕ್ಷಿ ಧೋನಿ ಅವರು "ಮಾಹಿ, ಕಾರುಗಳೆಂದರೆ ನಿನಗೆ ಏಕೆ ಇಷ್ಟ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ್ದ ಧೋನಿ, ನೀನು ಎಲ್ಲವನ್ನೂ ತೆಗೆದುಕೊಂಡಿದ್ದೀಯಾ, ಇದು ನನ್ನದು! ಎಂದು ತಮಾಷೆಯಾಗಿ ಹೇಳಿದ್ದರು. ಧೋನಿ ಅವರು ವಿಂಟೇಜ್ ಕಾರುಗಳನ್ನು ಸಂಗ್ರಹಿಸಿ ಇಡಲು ಇಷ್ಟಪಡುತ್ತಾರೆ. ಅವರ ಸಂಗ್ರಹವು ಅಮೆರಿಕನ್, ಬ್ರಿಟಿಷ್ ಮತ್ತು ಇಂಡಿಯನ್ ಕ್ಲಾಸಿಕ್‌ಗಳನ್ನು ಒಳಗೊಂಡಿದೆ. (ಏಜೆನ್ಸೀಸ್​)