ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿ ಸೋತ ಬಳಿಕ ಮಾಜಿ ನಾಯಕ ಎಂ.ಎಸ್. ಧೋನಿಯ ಉಪಸ್ಥಿತಿ ಬಗ್ಗೆ ವ್ಯಾಪಕ ಕೂಗು ಕೇಳಿಬಂದಿತ್ತು. ಆದರೆ, ಕಳೆದ ವರ್ಷದ ವಿಶ್ವಕಪ್ ಸೆಮಿಫೈನಲ್ನಲ್ಲಿ ತಂಡ ಹೊರಬಿದ್ದಿದೇ ತಡ ಈವರೆಗೂ ಧೋನಿ ತಂಡವನ್ನು ಸೇರಿಕೊಂಡಿಲ್ಲ. ಇದರ ನಡುವೆ ನಿವೃತ್ತಿಯ ಮಾತುಗಳು ಕೂಡ ಕೇಳಿಬರುತ್ತಿದ್ದು, ಸದ್ಯ ಕ್ರಿಕೆಟ್ನಿಂದ ಧೋನಿ ಕೊಂಚ ದೂರ ಉಳಿದಿದ್ದರೂ ತಮ್ಮ ವಿಶೇಷತೆಯಿಂದ ಮತ್ತೊಮ್ಮೆ ಅಭಿಮಾನಿಗಳ ಎದುರಿಗೆ ಬಂದಿದ್ದಾರೆ.
ಹೌದು, ಕ್ರಿಕೆಟ್ನಿಂದ ದೂರ ಉಳಿದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಧೋನಿ ಅವರು ತಮ್ಮ ಅಭಿಮಾನಿಗಳಿಗೆ ಆಗಾಗ ಸರ್ಪ್ರೈಸ್ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದ ಧೋನಿ, ಸ್ವತಃ ತಾವೇ ಸೆರೆ ಹಿಡಿದ ಹುಲಿಯ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ದಾರಿಯಲ್ಲಿ ಯಾವಾಗ ಹುಲಿ ಇರುವುದನ್ನು ಗಮನಿಸುತ್ತೀರಾ ಫೋಟೋ ತೆಗೆಯಲು ಅದೇ ನಿಮಗೆ ಸಹಕರಿಸುತ್ತದೆ ಎಂದು ತಮಾಷೆಯಾಗಿ ಬರೆದು, ಶೇರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಫೋಟೋ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಧೋನಿ ಮತ್ತೆ ಟೀಮ್ ಇಂಡಿಯಾ ಜರ್ಸಿ ತೊಡಲಿದ್ದಾರಾ ಎಂಬ ಪ್ರಶ್ನೆಗೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಅಲ್ಲದೆ, ಬಿಸಿಸಿಐ ಒಪ್ಪಂದದ ಪಟ್ಟಿಯಿಂದಲೂ ಧೋನಿಯನ್ನು ಕೈಬಿಟ್ಟಿರುವುದು ಧೋನಿ ಕ್ರಿಕೆಟ್ ಜೀವನದ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ಟೀಮ್ ಇಂಡಿಯಾ ಮುಡಿಗೆ ಮತ್ತೊಂದು ವಿಶ್ವಕಪ್ ಗರಿ ತಂದುಕೊಟ್ಟ ಧೋನಿ ಅವರನ್ನು ಮತ್ತೆ ಕ್ರೀಡಾಂಗಣದಲ್ಲಿ ನೋಡಬೇಕೆಂದು ಸಾಕಷ್ಟು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಆದರೆ, ಅದಕ್ಕೆ ಯಾವಾಗ ಕಾಲ ಕೂಡಿ ಬರುತ್ತದೋ ನೋಡಬೇಕು. (ಏಜೆನ್ಸೀಸ್)