ಕ್ರೀಡೆ

ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿ ಎಲ್ಲರನ್ನು ಚಕಿತಗೊಳಿಸಿದ ಧೋನಿಯ 5 ದೃಢ ನಿರ್ಧಾರಗಳಿವು!

ನವದೆಹಲಿ: ಹದಿನೈದು ವರ್ಷ ಭಾರತೀಯ ಕ್ರಿಕೆಟ್ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿಯವರ ಕ್ರಿಕೆಟ್​ ಯುಗಾಂತ್ಯವಾಗಿದೆ. ನಿನ್ನೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆಯೇ ವಿದಾಯ ಘೋಷಿಸಿ ಅಭಿಮಾನಿಗಳಿಗೆ ಶಾಕ್​ ನೀಡಿದರು. ಆದರೂ, ನೆಚ್ಚಿನ ಆಟಗಾರನನ್ನು ಸ್ಮರಿಸಿದ ಅಭಿಮಾನಿಗಳು ಭವಿಷ್ಯದ ಬಗ್ಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಧೋನಿಯವರು ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿದ್ದ ವೇಳೆ ತೆಗೆದುಕೊಂಡ 5 ದೃಢ ನಿರ್ಧಾರಗಳ ಬಗ್ಗೆ ಸ್ಮರಿಸಬೇಕಿದೆ.

ಐಸಿಸಿಯ ಎಲ್ಲ ಟ್ರೋಫಿಗಳನ್ನು (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್​ಷಿಪ್ ಗದೆ) ಜಯಿಸಿದ ವಿಶ್ವದ ಏಕೈಕ ನಾಯಕನೆಂಬ ಕೀರ್ತಿ ಗಳಿಸಿದ್ದಾರೆ. ಎಂ.ಎಸ್​. ಧೋನಿ ಅವರು ತಮ್ಮ ನಾಯಕತ್ವದಲ್ಲಿ ತೆಗೆದುಕೊಂಡಂತಹ ಐದು ಪ್ರಮುಖ ನಿರ್ಧಾರಗಳು ಎಲ್ಲರನ್ನು ಚಕಿತಗೊಳಿಸಿದರೂ ಸಹ ಅದರಿಂದ ಪಂದ್ಯವನ್ನು ಗೆದ್ದಿದ್ದು ಅಚ್ಚರಿಯೇ ಸರಿ. ಈ ಕಾರಣದಿಂದಲೇ ಧೋನಿ ನಾಯಕತ್ಮ ಎಂದಿಗೂ ಹಸಿರಾಗಿರುತ್ತದೆ. ಹಾಗಾದರೆ ಧೋನಿ ತೆಗೆದುಕೊಂಡು ನಿರ್ಧಾರಗಳು ಯಾವುವು ಎಂದು ನೋಡುವುದಾದರೆ...

1. ಜೋಗಿಂದರ್​ ಶರ್ಮಾರಿಗೆ ಕೊನೆಯ ಓವರ್​ ನೀಡಿದ್ದು

ಹೌದು, 2007ರಲ್ಲಿ ನಡೆದ ಐಸಿಸಿ ಟಿ20 ಫೈನಲ್​ ಪಂದ್ಯದಲ್ಲಿ ಧೋನಿ ನಿರ್ಧಾರ ಎಲ್ಲರನ್ನು ದಿಗ್ಭ್ರಾಂತಗೊಳಿಸಿತು. ಪಂದ್ಯದ ಕೊನೆಯ ಓವರ್​ ಅನ್ನು ಅನುಭವಿ ಹರ್ಭಜನ್​ಗೆ ನೀಡದೇ ಆಗಷ್ಟೇ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಜೋಗಿಂದರ್​ ಶರ್ಮಾರಿಗೆ ಧೋನಿ ನೀಡಿದ್ದರು. ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ ಒಂದು ಓವರ್​ನಲ್ಲಿ 13 ರನ್​ ಬೇಕಿತ್ತು. ಪಾಕ್​ನ ಮಿಸ್ಬಾ ಉಲ್​ ಹಕ್​ ಕ್ರೀಸ್​ನಲ್ಲಿದ್ದರು. ಹರ್ಭಜನ್ ಎಸೆದ 17ನೇ0​ ಓವರ್​ನಲ್ಲಿ ಮಿಸ್ಬಾ 3 ಸಿಕ್ಸರ್​ ಬಾರಿಸಿದ್ದರಿಂದ ನಿರ್ಧಾರ ಬದಲಿಸಿದ ಧೋನಿ ಜೋಗಿಂದರ್​ಗೆ ಓವರ್​ ಮಾಡಲು ಹೇಳಿದರು. ಓವರ್​ನ ಮೊದಲನೇ ಎಸೆತವನ್ನು ವೈಡ್​ ಮಾಡುವ ಮೂಲಕ ಜೋಗಿಂದರ್​ ಶಾಕ್​ ನೀಡಿದಾದರೂ ನಂತರ ಬಾಲ್​ ಅನ್ನು ಡಾಟ್​ ಮಾಡಿಸಿದರು. ಎರಡನೇ ಎಸತವನ್ನು ಮಿಸ್ಬಾ ಸಿಕ್ಸರ್​ ಬಾರಿಸಿದ್ದು ಮತ್ತೆ ಭಾರತೀಯರಿಗೆ ಆಘಾತವಾಯಿತು. ಇದಾದ ಬೆನ್ನಲ್ಲೇ ಮಿಸ್ಬಾ ಬಲವಾದ ಹೊಡೆತಕ್ಕೆ ಕೈಹಾಕಿ ಶ್ರೀಶಾಂತ್​ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಅಲ್ಲಿಗೆ ಇಂಡಿಯಾ ಪಾಳೆಯದಲ್ಲಿ ಹರ್ಷ ಮುಗಿಲು ಮುಟ್ಟಿತು. ಅಂದಹಾಗೆ ಟಿ20 ವಿಶ್ವಕಪ್​ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ನಡೆದಿತ್ತು.

2. ಏಕದಿನ ಪಂದ್ಯಗಳಿಂದ ಸೌರವ್​ ಗಂಗೂಲಿ ಹಾಗೂ ರಾಹುಲ್​ ಡ್ರಾವಿಡ್​ ಕೈಬಿಟ್ಟಿದ್ದು

2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿ (ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ)ಗೆ ಗಂಗೂಲಿ ಹಾಗೂ ಡ್ರಾವಿಡ್​ಗೆ ಕೋಕ್​ ಕೊಡುವ ನಿರ್ಧಾರವನ್ನು ಧೋನಿ ಆಯ್ಕೆಗಾರರ ಮುಂದಿಟ್ಟಿದ್ದರು. ಕೊನೆಗೆ ಧೋನಿ ಹೇಳಿದ ಮಾತೇ ನಡೆಯಿತು. ಈ ಬಗ್ಗೆ ಅಂದಿನ ಬಿಸಿಸಿಐ ಕಾರ್ಯಾದರ್ಶಿಯನ್ನು ಪ್ರಶ್ನಿಸಿದಾಗ ಫೀಲ್ಡಿಂಗ್​ ಸಾಮರ್ಥ್ಯದ ಬಗ್ಗೆ ಉಲ್ಲೇಖಿಸಿ, ಮುಖ್ಯ ಆಯ್ಕೆಗಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ಯುವ ಆಟಗಾರರಿಗೆ ಮಣೆ ಹಾಕಿದೆ ಎಂದಿದ್ದರು. ಬ್ಯಾಟಿಂಗ್​ ಮತ್ತು ಬೌಲಿಂಗ್​ನಷ್ಟೇ ಫೀಲ್ಡಿಂಗ್​ನಲ್ಲೂ ಭಾರತ ಗಟ್ಟಿಯಾಗಿದ್ದರೆ ಯಶಸ್ಸು ಸಾಧ್ಯ ಎಂಬುದು ಧೋನಿಯ ನಿಲುವಾಗಿತ್ತು. ಅದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದಲ್ಲಿ ಮೊದಲ ತ್ರಿಕೋನ ಸರಣಿಯನ್ನು ಭಾರತ ಗೆದ್ದುಕೊಂಡಿತು.

3. 5ನೇ ಬ್ಯಾಟಿಂಗ್​ ಕ್ರಮಾಂಕ ಆಯ್ದುಕೊಂಡಿದ್ದು

2011ರ ವಿಶ್ವಕಪ್​ ಎಂದಿಗೂ ಮರೆಯಲಾಗದು. ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಲಂಕಾ 275 ರನ್​ ಟಾರ್ಗೇಟ್​ ನೀಡಿತ್ತು. ಇದರ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್​ ಮತ್ತು ವಿರಾಟ್​ ಕೊಹ್ಲಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪಂದ್ಯದ ಗೆಲ್ಲಲು ಇನ್ನು 161 ರನ್​ ಬಾಕಿ ಇತ್ತು. ಅಲ್ಲದೇ ಲಸಿತ್​ ಮಾಲಿಂಗ್​ ಬೌಲಿಂಗ್​ ಒಳ್ಳೆಯ ಲಯದಲ್ಲಿದ್ದರು. ಇಂತಹ ಸಂದಿಗ್ಧ ಸಮಯದಲ್ಲಿ ಧೋನಿ ತೆಗೆದುಕೊಂಡು ನಿರ್ಧಾರ ಕೊನೆಗೂ ಕೈಹಿಡಿದೇ ಬಿಟ್ಟಿತ್ತು. ಐದನೇ ಕ್ರಮಾಂಕದಲ್ಲಿ ಯುವಿ ಬದಲಾಗಿ ತಾವೇ ಕಣಕ್ಕಿಳಿದರು. ಕೊನೆಯವರೆಗೂ ವಿಕೆಟ್​ ನೀಡದೇ ಸಿಕ್ಸರ್​ನಲ್ಲಿ ತಂಡಕ್ಕೆ ಧೋನಿ ಜಯ ತಂದುಕೊಟ್ಟಿದ್ದರು. ಭಾರತದ ಪಾಲಿಗೆ ಅಂದು ಎರಡನೇ ವಿಶ್ವಕಪ್​ ಕಿರೀಟ ದೊರೆಯಿತು.

4. ಸಚಿನ್​, ಸೆಹ್ವಾಗ್​, ಗಭೀರ ರೊಟೇಶನ್​

ಯಾರು ಏನೇ ಅಂದರೂ ಸರಿ ತಂಡದ ಗೆಲುವೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದ ಧೋನಿ 2008ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮತ್ತೊಮ್ಮೆ ಅನುಸರಿಸಲು ಮುಂದಾದರು. ಅಂದರೆ, 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಸಚಿನ್​, ಸೆಹ್ವಾಗ್​ ಹಾಗೂ ಗಭೀರ ಅವರನ್ನು ರೊಟೇಶನ್ ಆಧಾರದ ಮೇಲೆ ಆಡಿಸಿದರು. ಫೀಲ್ಡಿಂಗ್​ನಲ್ಲಿ ಅಶಕ್ತರಾಗಿದ್ದ ಕಾರಣ ಮೂವರನ್ನು ರೊಟೇಶನ್​ ಆಧಾರದ ಮೇಲೆ ಆಡಿಸಿದರು. ಆದರೆ, ಆರಂಭಿಕರಾಗಿದ್ದ ಮೂವರ ಕಳಪೆ ಸಾಧನೆಯಿಂದ ತಂಡ ಫೈನಲ್​ ಪ್ರವೇಶಿಸುವಲ್ಲಿ ವಿಫಲವಾದರೂ ಆರಂಭಿಕ ಬದಲಾವಣೆಗೆ ಧೋನಿ ಮನಸ್ಸು ಮಾಡಿದರು.

5. ಆರಂಭಿಕರಾಗಿ ರೋಹಿತ್​ ಹೊಸ ಆಯ್ಕೆ

ಆರಂಭಿಕ ಆಟಗಾರರ ಸಾಕಷ್ಟು ವಿಫಲತೆಯನ್ನು ಕಂಡ ಧೋನಿ ಆ ಸ್ಥಾನಕ್ಕೆ ಮತ್ತೊಬ್ಬರನ್ನು ತಯಾರಿ ಮಾಡುವ ನಿರ್ಧಾರಕ್ಕೆ ಬಂದರು. ಆಗ ಧೋನಿಗೆ ತಲೆಗೆ ಬಂದಿದ್ದೆ ರೋಹಿತ್​ ಹೆಸರು. ಆರಂಭದಲ್ಲಿ ರೋಹಿತ್​ ವಿಫಲರಾದರು. 2011ರಲ್ಲಿ ರೋಹಿತ್ ಮೊದಲ ಬಾರಿಗೆ ಆರಂಭಿಕರಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದರು. ಆದರೆ ಮೂರು ಪಂದ್ಯಗಳಲ್ಲಿ ಕೇವಲ 29ರನ್​ ಗಳಿಸಿದರು.​ ಆದರೂ ಸಹ ನಂತರ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆರಂಭಿಕನ ಸ್ಥಾನವನ್ನು ಅಲಂಕರಿಸಿದರು. (ಏಜೆನ್ಸೀಸ್​)