ಕ್ರೀಡೆ

IPL 2024: ವಾಂಖೆಡೆಯಲ್ಲಿ ಇಂದು ಮುಂಬೈ-ಸಿಎಸ್​ಕೆ ಮುಖಾಮುಖಿ; ಐಪಿಎಲ್​ ಇತಿಹಾಸದ ಯಶಸ್ವಿ ತಂಡಗಳ ಸೆಣಸಾಟ

ಮುಂಬೈ: ಕಳೆದ 16 ಆವೃತ್ತಿಗಳಲ್ಲಿ ತಲಾ 5ರಂತೆ 10 ಬಾರಿ ಚಾಂಪಿಯನ್​ ಅಲಂಕರಿಸಿರುವ ಐಪಿಎಲ್​ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ರೋಹಿತ್​ ಶರ್ಮ-ಎಂಎಸ್​ ಧೋನಿಗೆ ಬದಲಾಗಿ ಉಭಯ ತಂಡಗಳು ಈ ಬಾರಿ ಹೊಸ ನಾಯಕರನ್ನು ಹೊಂದಿದ್ದು, ಈ ಹಿಂದಿನ ಜಿದ್ದಾಜಿದ್ದಿನ ಪೈಪೋಟಿ ಈ ಸಲವೂ ಮುಂದುವರಿಯುವ ನಿರೀಕ್ಷೆ ಇದೆ.

ಐಪಿಎಲ್​ನ ಒಟ್ಟಾರೆ ಮುಖಾಮುಖಿ ದಾಖಲೆಯಲ್ಲಿ ಮುಂಬೈ ತಂಡ ಮೇಲುಗೈ ಹೊಂದಿದ್ದರೂ, ಉಭಯ ತಂಡಗಳ ಕೊನೇ 5 ಮುಖಾಮುಖಿಗಳಲ್ಲಿ 4ರಲ್ಲಿ ಸಿಎಸ್​ಕೆ ತಂಡವೇ ಜಯಿಸಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ ವಾಂಖೆಡೆಯಲ್ಲೇ ನಡೆದ ಪಂದ್ಯವೂ ಸೇರಿದೆ. ಆದರೆ ಐಪಿಎಲ್ ಫೈನಲ್​ನಲ್ಲಿ 3 ಬಾರಿ ಸಿಎಸ್​ಕೆ ತಂಡವನ್ನೇ ಮಣಿಸಿ ಪ್ರಶಸ್ತಿ ಗೆದ್ದಿರುವ ಬಲಿಷ್ಠ ದಾಖಲೆ ಮುಂಬೈ ತಂಡದ್ದಾಗಿದೆ. ಹೀಗಾಗಿ ಈ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್​ ವಿಭಾಗವನ್ನೂ ಹೊಂದಿದ್ದು, ವಾಂಖೆಡೆಯಲ್ಲಿ ರನ್​ಮಳೆಯಾಗುವ ನಿರೀಕ್ಷೆಯೂ ಇದೆ.

ಸಿಎಸ್​ಕೆಗೆ ತವರಿನಿಂದ ಹೊರಗೆ ಗೆಲ್ಲದ ಹಿನ್ನಡೆ

ಋತುರಾಜ್​ ಗಾಯಕ್ವಾಡ್​ ಸಾರಥ್ಯದಲ್ಲಿ ಸಿಎಸ್​ಕೆ ತಂಡ "ತವರಿನಲ್ಲಿ ಹುಲಿ, ಹೊರಗೆ ಇಲಿ' ಎಂಬಂತಾಗಿದೆ. ಸಿಎಸ್​ಕೆ ತಂಡ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. ಈ ಪೈಕಿ ಮೂರೂ ಗೆಲುವುಗಳು ತವರಿನಲ್ಲೇ ಬಂದಿದ್ದರೆ, ತವರಿನಿಂದ ಹೊರಗೆ ಆಡಿರುವ 2 ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಹೀಗಾಗಿ ಈ ಬಾರಿ ಎದುರಾಳಿ ನೆಲದಲ್ಲೂ ಗೆದ್ದು ತೋರಿಸುವ ಒತ್ತಡ ಸಿಎಸ್​ಕೆ ತಂಡದ ಮೇಲಿದೆ. ಕಳೆದ ಪಂದ್ಯದಲ್ಲಿ ಆರ್​ಸಿಬಿ ಎದುರು ಆರ್ಭಟ ತೋರಿದ ಮುಂಬೈ ಬ್ಯಾಟಿಂಗ್​ ವಿಭಾಗ ಸಿಎಸ್​ಕೆ ಬೌಲರ್​ಗಳಿಗೆ ಪ್ರಮುಖ ಸವಾಲಾಗಲಿದೆ. ಚೆಪಾಕ್​ನ ಸ್ಲೋ ಪಿಚ್​ನಲ್ಲಿ ಸಿಎಸ್​ಕೆ ಬೌಲರ್​ಗಳು ಪ್ರಾಬಲ್ಯ ತೋರಿದ್ದರೂ, ಬ್ಯಾಟಿಂಗ್​ ಸ್ನೇಹಿ ಪಿಚ್​ಗಳಲ್ಲಿ ಅವರಿಗೆ ನಿಜವಾದ ಸತ್ವ ಪರೀೆ ಎದುರಾಗಲಿದೆ.

ವಿಶ್ವಾಸದಲ್ಲಿ ಹಾರ್ದಿಕ್​ ಬಳಗ

ಆರಂಭಿಕ 3 ಪಂದ್ಯಗಳ ಸೋಲಿನ ಬಳಿಕ ಮುಂಬೈ ಸತತ 2 ಜಯದೊಂದಿಗೆ ಪುಟಿದೆದ್ದಿದೆ. ಆದರೆ ಇವೆರಡೂ ಗೆಲುವುಗಳು ಅಂಕಪಟ್ಟಿಯ ಕೊನೇ 2 ಸ್ಥಾನದಲ್ಲಿರುವ ತಂಡಗಳ ಎದುರು ಬಂದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ಸಿಎಸ್​ಕೆ ಎದುರು ಮುಂಬೈಗೆ ರಿಯಲ್​ ಟೆಸ್ಟ್​ ಎದುರಾಗಲಿದೆ. ಸೂರ್ಯಕುಮಾರ್​ ತಂಡಕ್ಕೆ ಮರಳಿರುವ ನಡುವೆ ಇಶಾನ್​ ಕಿಶನ್​ ಲಯ ಕಂಡುಕೊಂಡಿರುವುದು ಮುಂಬೈ ಬಲ ಹೆಚ್ಚಿಸಿದೆ. ಜತೆಗೆ ಕಳೆದ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾಗೆ ಇತರ ಬೌಲರ್​ಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ಕನ್ನಡಿಗ ಹಾಗೂ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ ಮುಂಬೈ ಪರ ಆಡಿದ ಮೊದಲ ಪಂದ್ಯದಲ್ಲೇ ಗಮನಾರ್ಹ ನಿರ್ವಹಣೆ ತೋರಿದ್ದಾರೆ.

ಮುಖಾಮುಖಿ: 36

ಮುಂಬೈ: 20

ಸಿಎಸ್​ಕೆ: 16

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.