Ex-CSK Star: ಭಾರತೀಯ ಕ್ರಿಕೆಟ್‌ನ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಚಾಂಪಿಯನ್ಸ್ ಲೀಗ್ ಟಿ20 (ಸಿಎಲ್‌ಟಿ20) ಪಂದ್ಯದಲ್ಲಿ ತಮ್ಮ ಸಹ ಆಟಗಾರರಾದ ಮೋಹಿತ್ ಶರ್ಮಾ ಅವರನ್ನು ನಿಂದಿಸಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಿದೆ. ಈ ವಿಷಯವನ್ನು ಸ್ವತಃ ನಿಂದನೆಯ ಫಲಾನುಭವಿ ಮೋಹಿತ್ ತಿಳಿಸಿದ್ದಾರೆ.
ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೋಹಿತ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮಹಿ ಭಾಯ್ ಈಶ್ವರ್ ಪಾಂಡೆಗೆ ಬೌಲಿಂಗ್ ಮಾಡಲು ಕರೆದರು, ಆದರೆ ಅವರು ನನಗೆ ಕರೆದಿದ್ದಾರೆ ಎಂದು ತಪ್ಪಾಗಿ ಭಾವಿಸಿದೆ ಎಂದು ವಿವರಿಸಿದರು.
ನಾನು ರನ್-ಅಪ್ ಪ್ರಾರಂಭಿಸಿದೆ, ಆದರೆ ಮಹಿ ಭಾಯ್ ನಿನ್ನನ್ನು ಕರೆದಿಲ್ಲ ಎಂದರು, ಮತ್ತೆ ಈಶ್ವರ್‌ಗೆ ಕರೆಯಲು ಪ್ರಯತ್ನಿಸಿದರು, ನಾನು ಅದಾಗಲೇ ರನ್-ಅಪ್ ಪ್ರಾರಂಭಿಸಿದ್ದರಿಂದ ಬೌಲಿಂಗ್ ಮುಂದುವರಿಸಬೇಕೆಂದು ಅಂಪೈರ್ ತಿಳಿಸಿದರು, ಇದರಿಂದ ತಾಳ್ಮೆ ಕಳೆದುಕೊಂಡು ಧೋನಿ ನನ್ನನ್ನು ನಿಂದಿಸಿದರು ಎಂದು ಮೋಹಿತ್ ಬಹಿರಂಗಪಡಿಸಿದ್ದಾರೆ. ಆ ಓವರ್ನ ಮೊದಲ ಎಸೆತದಲ್ಲೇ ನಾನು ಯೂಸುಫ್ ಪಠಾಣ್ ವಿಕೆಟ್ ಪಡೆದೆ. ಸಂಭ್ರಮಾಚರಣೆಯ ಸಮಯದಲ್ಲಿ, ಮಹಿ ಭಾಯ್ ಇನ್ನೂ ನಿಂದಿಸುತ್ತಿದ್ದರು ಎಂದು ಮೋಹಿತ್ ನೆನಪಿಸಿಕೊಂಡರು.
ನಾನು ಧೋನಿಯವರಿಂದ ಅಟವನ್ನು ಹೊರತುಪಡಿಸಿ ಅನೇಕ ವಿಷಯಗಳನ್ನು ಕಲಿತಿದ್ದೇನೆ, ಅವರೊಂದಿಗೆ ಕುಳಿತಾಗಲೆಲ್ಲಾ ಬೇರೆ ಏನನ್ನಾದರೂ ಕಲಿಯುತ್ತೀರಿ ಎಂದರು.(ಏಜೆನ್ಸೀಸ್)