ಕ್ರೀಡೆ

ಯಾವುದು ನನ್ನ ಕೈಯಲ್ಲಿಲ್ಲ… ಐಪಿಎಲ್​ ನಿವೃತ್ತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಕ್ಯಾಪ್ಟನ್ ಕೂಲ್

ಹೈದರಾಬಾದ್: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್​ ಎಂದೇ ಹೆಸರುವಾಸಿಯಾಗಿರುವ ಮಹೇಂದ್ರ ಸಿಂಗ್​ ಧೋನಿ ಅವರು 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಲಿದ್ದಾರಾ ಅಥವಾ ನಿವೃತ್ತಿ ಹೊಂದಲಿದ್ದಾರಾ ಎಂಬುದರ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.

ಏಕೆಂದರೆ 17 ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿಯುವ ಮೂಲಕ ನಿವೃತ್ತಿಯಾಗುವ ಸುದ್ದಿಗೆ ಇಂಬು ನೀಡಿದ್ದರು. ಇದಾದ ಬಳಿಕ ಆರ್​ಸಿಬಿ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ ಸೋತ ಬಳಿಕ ಧೋನಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತಾದರು ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ಧೋನಿ ನಿವೃತ್ತಿಯ ನಿರ್ಧಾರವು ತನ್ನ ಕೈಯಲ್ಲಿಲ್ಲ ಎಂದು ಹೇಳುವ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.

ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಧೋನಿಗೆ ನೀವು ಮುಂದಿನ ಐಪಿಎಲ್​ ಆಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಕೂಲ್​ ಆಗಿ ಉತ್ತರಿಸಿದ ಧೋನಿ ಐಪಿಎಲ್​ನಲ್ಲಿ ಆಡುವುದು ನನ್ನ ಕೈಯಲ್ಲಿಲ್ಲ. ಐಪಿಎಲ್ 2025ರ ನಿಯಮಗಳನ್ನು ನೋಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೀಗಾಗಿ ಪ್ರಸ್ತುತ ಈ ನಿರ್ಧಾರವು ನನ್ನ ಕೈಯಲ್ಲಿಲ್ಲ. ತಂಡ ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕಾಗಿ ನಾವು ಕಾಯಬೇಕಾಗಿದೆ. ಚೆಂಡು ಸದ್ಯಕ್ಕೆ ನಮ್ಮ ಅಂಗಳದಲ್ಲಿಲ್ಲ. ನಿಯಮಗಳು ಮತ್ತು ನಿಬಂಧನೆಗಳನ್ನು ನೋಡಿದ ನಂತರ ನಾನು ತಂಡದ ಹಿತಾಸಕ್ತಿ ಪರಿಗಣಿಸಿ ನಿವೃತ್ತಿಯ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

2025ರಲ್ಲಿ ಐಪಿಎಲ್​ ಶುರುವಾಗುವುದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಎಷ್ಟು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಬೇಕೆಂಬುದರ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್​ ಮ್ಯಾನೇಜ್​ಮೆಂಟ್​ ಯಾವುದೇ ಸ್ಪಷ್ಟನೆ ನೀಡಿಲ್ಲ. ಕ್ರಿಕ್​ಬಜ್​ ವರದಿ ಮಾಡಿರುವ ಪ್ರಕಾರ ಬಿಸಿಸಿಐ ಫ್ರಾಂಚೈಸಿಯಲ್ಲಿ 5-6 ಆಟಗಾರರನ್ನು ರಿಟೇನ್​ ಮಾಡುವ ಅವಕಾಶ ಏನಾದರೂ ನೀಡದ್ದಲ್ಲಿ ಧೋನಿ ಸಿಎಸ್​ಕೆಯಲ್ಲೇ ಮುಂದುವರೆಯಲಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸಿಎಸ್​ಕೆ ಫಾಂಚೈಸಿಯು ನಾಯಕ ಋತುರಾಜ್​ ಗಾಯಕ್ವಾಡ್​, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ವಿದೇಶಿ ಆಟಗಾರರ ಕೋಟಾದಲ್ಲಿ ಶ್ರೀಲಂಕಾದ ಮಥೀಶ ಪಥಿರಾಣಾರನ್ನು ಉಳಿಸಿಕೊಳ್ಳಲು ಮುಂದಾಗಿದೆ.