ಕ್ರೀಡೆ

44 ವರ್ಷಗಳ ಬಳಿಕ ಫೈನಲ್‌ಗೇರುವ ಕನಸು: ಗೆದ್ದರೆ ಹಾಕಿಯಲ್ಲಿ ಭಾರತಕ್ಕೆ ಸತತ 2ನೇ ಪದಕ ಖಚಿತ!

ಪ್ಯಾರಿಸ್: ಟೋಕಿಯೊ ಗೇಮ್ಸ್‌ನಲ್ಲಿ 41 ವರ್ಷಗಳ ಪದಕದ ಬರ ನೀಗಿಸಿದ್ದ ಭಾರತ ಪುರುಷರ ಹಾಕಿ ತಂಡ ಇದೀಗ 44 ವರ್ಷಗಳ ಬಳಿಕ ಒಲಿಂಪಿಕ್ಸ್ ಫೈನಲ್‌ಗೇರುವ ಸನಿಹದಲ್ಲಿದೆ. ಮಂಗಳವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಕಂಚಿನ ಪದಕವನ್ನು ಸ್ವರ್ಣವಾಗಿಸುವ ಅವಕಾಶ ಹರ್ಮಾನ್‌ಪ್ರೀತ್ ಸಿಂಗ್ ಪಡೆ ಮುಂದಿದೆ.

ಇದುವರೆಗೆ ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಸೇರಿ ಒಟ್ಟು 12 ಪದಕ ಜಯಿಸಿರುವ ಭಾರತ ತಂಡ 13ನೇ ಪದಕದ ನಿರೀಕ್ಷೆಯಲ್ಲಿದೆ. ಸೆಮೀಸ್ ಗೆಲುವು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಾತ್ರಿ ಪಡಿಸಲಿದ್ದು, 1980ರ ಮಾಸ್ಕೋ ಕೂಟದಲ್ಲಿ ಭಾರತ ಕೊನೆಯದಾಗಿ ಸ್ವರ್ಣ ಜಯಿಸಿತ್ತು. ಭಾರತ ಹಾಗೂ ಜರ್ಮನಿ ನಡುವಿನ ಪಂದ್ಯ ಕಳೆದ ಬಾರಿಯ ಕಂಚಿನ ಫೈಟ್‌ನ ಮರು ಪಂದ್ಯ ಎನಿಸಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ವಿರುದ್ಧ ಜಿದ್ದಾಜಿದ್ದಿನ ಪ್ರದರ್ಶನ ನೀಡಿ ಶೂಟೌಟ್‌ನಲ್ಲಿ ಗೆದ್ದು ಬೀಗಿದ ಭಾರತಕ್ಕೆ ಈ ಬಾರಿ ಚಿನ್ನ ಗೆಲ್ಲುವ ಸುವರ್ಣಾವಕಾಶವಿದೆ.

ಒಲಿಂಪಿಕ್ಸ್ ಹಾಲಿ ಚಾಂಪಿಯನ್ ಬೆಲ್ಜಿಯಂ, ರನ್ನರ್ ಅಪ್ ಆಸ್ಟ್ರೇಲಿಯಾ ಎರಡು ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದಿದ್ದು, ಭಾರತ ಫೇವರಿಟ್ ಎನಿಸಿದೆ. ನಾಯಕ ಹರ್ಮಾನ್‌ಪ್ರೀತ್ ಕೂಟದಲ್ಲಿ 7 ಗೋಲು ಸಿಡಿಸಿ, ಭರ್ಜರಿ ಲಯದಲ್ಲಿದ್ದಾರೆ. ‘ಭಾರತೀಯ ಹಾಕಿಯ ಗೋಡೆ’ ಎಂದು ಕರೆಯಲ್ಪಡುವ ಅನುಭವಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ತನ್ನ ಕೊನೆಯ ಅಂತಾರಾಷ್ಟ್ರೀಯ ಕೂಟದ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆ. ರೋಹಿದಾಸ್ ಅವರ ಅನುಪಸ್ಥಿತಿಯಲ್ಲಿ ಹರ್ಮಾನ್‌ಪ್ರೀತ್ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ.

ಪ್ರಸ್ತುತ ಎ್ಐಎಚ್ ವಿಶ್ವ ರ್ಯಾಕಿಂಗ್‌ನಲ್ಲಿ ಭಾರತ 5ನೇ ಸ್ಥಾನದಲ್ಲಿದ್ದು, ಜರ್ಮನಿ 2ನೇ ಸ್ಥಾನದಲ್ಲಿದೆ. ಜರ್ಮನಿ ತಂಡ ಕ್ವಾರ್ಟರ್‌ೈನಲ್‌ನಲ್ಲಿ ಅರ್ಜೆಂಟೀನಾವನ್ನು 3-2ರಿಂದ ಮಣಿಸಿ ಉಪಾಂತ್ಯಕ್ಕೇರಿದೆ. ಕಳೆದ ಜೂನ್‌ನಲ್ಲಿ ಪ್ರೊ ಹಾಕಿ ಲೀಗ್‌ನಲ್ಲಿ ಉಭಯ ತಂಡಗಳು 2 ಬಾರಿ ಪರಸ್ಪರ ಎದುರಾಗಿದ್ದು, ತಲಾ ಒಮ್ಮೆ ಜಯಿಸಿವೆ. ಭಾರತ ಹಾಗೂ ಜರ್ಮನಿ ನಡುವಿನ ಹಿಂದಿನ 8 ಕಾದಾಟದಲ್ಲಿ ಭಾರತವೇ 7-1 ರಿಂದ ಮೇಲುಗೈ ಸಾಧಿಸಿದೆ. ದಿನದ ಮೊದಲ ಸೆಮಿಫೈನಲ್‌ನಲ್ಲಿ ನೆದರ್ಲೆಂಡ್ ಹಾಗೂ ಸ್ಪೇನ್ ತಂಡಗಳು ಎದುರಾಗಲಿವೆ.