ನವದೆಹಲಿ: ಸದ್ಯ ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಎಲ್ಲ ಕ್ರೀಡಾ ಚಟುವಟಿಕೆಗಳು ಹಾಗೂ ಸಿನಿಮಾ ಶೂಟಿಂಗ್ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಕಲಾವಿದರು ಮತ್ತು ಕ್ರೀಡಾಪಟುಗಳು ಮನೆಯಲ್ಲೇ ಬಂದಿಗಳಾಗಿ ಕಾಲಕಳೆಯುತ್ತಿದ್ದಾರೆ.
ಅವಕಾಶ ಸಿಕ್ಕಾಗ ಹೊರಬರುವ ಇವರು, ಕೈತೋಟ ಮಾಡುವುದು, ಕ್ರಿಕೆಟ್ ಆಡುವುದು ಇಲ್ಲವೇ ಮನೆಯೊಳಗೇ ಪುಸ್ತಕ ಓದುತ್ತಲೋ ಕಾಲಕ್ಷೇಪ ಮಾಡುತ್ತಿದ್ದಾರೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮ ಕೂಡ ಹೊರತಲ್ಲ.
ಇದನ್ನೂ ಓದಿ: ಸಿಇಟಿ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ
ಶನಿವಾರ ಈ ಜೋಡಿ ತಮ್ಮ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡಿತು. ಅವರ ಪಕ್ಕದಮನೆಯ ಮಾಲೀಕ ಮಾನವ ಮಂಗಲಾನಿ ಎಂಬುವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ತುಣುಕಿನಲ್ಲಿ ಮೊದಲು ಅನುಷ್ಕಾ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಬಳಿಕ ವಿರಾಟ್ ಕೊಹ್ಲಿ ಪತ್ನಿಯಿಂದ ಬ್ಯಾಟ್ ಪಡೆದು ಗ್ಲೌಸ್ ಹಾಕಿಕೊಂಡು ಬ್ಯಾಟಿಂಗ್ ಮಾಡುತ್ತಾರೆ. ವ್ಯಕ್ತಿಯೊಬ್ಬರು ವಿಕೆಟ್ ಕೀಪಿಂಗ್ ಮಾಡುವ ದೃಶ್ಯವೂ ಇದರಲ್ಲಿದೆ.
ವಿರೂಷ್ಕಾ ಅಭಿಮಾನಿಗಳು ದಂಪತಿಯ ಕ್ರಿಕೆಟ್ ಆಟವನ್ನು ಆಸ್ವಾದಿಸಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರಿಬ್ಬರಿಗಾಗಿ ದೆಹಲಿಯಲ್ಲಿ ಇಷ್ಟು ದೊಡ್ಡ ಬಂಗಲೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೆಲವರು ವಿಶಾಲವಾದ ಮನೆಯನ್ನು ಕಂಡು ಅಚ್ಚರಿಪಟ್ಟರೆ, ಹಲವರು ಇಬ್ಬರಿಗಾಗಿ ಇಷ್ಟೊಂದು ಸಣ್ಣ ಮನೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.