ನವದೆಹಲಿ: ಮುಂದಿನ ಐಪಿಎಲ್ ಟೂರ್ನಿಗೆ ತಂಡಗಳ ಸಂಖ್ಯೆಯನ್ನು ಏರಿಸುವ ಪ್ರಸ್ತಾಪದ ಬೆನ್ನಲ್ಲೇ, ಪ್ರತಿ ತಂಡದಲ್ಲಿ ಆಡುವ ವಿದೇಶಿ ಆಟಗಾರರ ಸಂಖ್ಯೆಯನ್ನೂ 4ರಿಂದ 5ಕ್ಕೇರಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಮುಂದಿನ ಐಪಿಎಲ್‌ಗೆ ಈಗಿರುವ 8 ತಂಡಗಳ ಜತೆಗೆ ಒಂದು ಅಥವಾ ಎರಡು ಹೊಸ ತಂಡಗಳನ್ನು ಸೇರಿಸಲು ಬಿಸಿಸಿಐ ಬಯಸಿದೆ. ಆದರೆ ಇದಕ್ಕೆ ಈಗಿರುವ ತಂಡಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಇದೆ. ಹೀಗಾಗಿ ಈ ತಂಡಗಳ ಮನವೊಲಿಸುವ ಸಲುವಾಗಿ, ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸುವ ಪ್ರಸ್ತಾಪವನ್ನು ಮುಂದಿಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪ್ರಸಕ್ತ ಪ್ರತಿ ಐಪಿಎಲ್ ತಂಡಗಳಲ್ಲಿ 18ರಿಂದ 25 ಆಟಗಾರರು ಇರುತ್ತಾರೆ. ಈ ಪೈಕಿ ಗರಿಷ್ಠ 8 ವಿದೇಶಿ ಆಟಗಾರರು ಇರುತ್ತಾರೆ. ಆದರೆ ಆಡುವ ಬಳಗದಲ್ಲಿ ನಾಲ್ವರು ವಿದೇಶಿ ಆಟಗಾರರನ್ನು ಮಾತ್ರ ಆಡಿಸಲು ಅವಕಾಶವಿದೆ. ಉಳಿದಂತೆ 7 ಭಾರತೀಯರೇ ಇರಬೇಕು. ಇದರಿಂದಾಗಿ ಕೆಲ ತಂಡಗಳು ಹೆಚ್ಚಿನ ಸ್ಪರ್ಧಾತ್ಮಕತೆ ಕಾಣಲು ಪರದಾಡುತ್ತಿವೆ. ಹೆಚ್ಚಿನ ತಂಡಗಳಲ್ಲಿ 7ರಿಂದ 9 ಆಟಗಾರರಷ್ಟೇ ಕಾಯಂ ಸದಸ್ಯರಾಗಿರುತ್ತಾರೆ. ಉಳಿದಂತೆ 2-3 ಆಟಗಾರರನ್ನು ಆವರ್ತನ ಪದ್ಧತಿಯನ್ವಯ ಬದಲಾಯಿಸಲಾಗುತ್ತದೆ. ಈ ಮೂಲಕ ತಂಡದಲ್ಲಿ ಸಮತೋಲನ ತರುವ ಪ್ರಯತ್ನ ನಡೆಸಲಾಗುತ್ತದೆ. ಇದಕ್ಕೆ ಬದಲಾಗಿ ವಿದೇಶಿ ಆಟಗಾರರ ಸಂಖ್ಯೆ ಹೆಚ್ಚಿಸಿದರೆ, ತಂಡದಲ್ಲಿ ಗುಣಮಟ್ಟ ಹೆಚ್ಚುತ್ತದೆ. ಯಾಕೆಂದರೆ ವಿದೇಶಿ ಆಟಗಾರರು ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಅನುಭವಿ ಆಟಗಾರರೇ ಆಗಿರುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಪ್ರತಿ ತಂಡದಲ್ಲಿ 8ಕ್ಕೆ ಬದಲಾಗಿ 10 ವಿದೇಶಿ ಆಟಗಾರರನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಿ. ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ನೀಡಿದರೆ ತಂಡದ ಗುಣಮಟ್ಟವೂ ಹೆಚ್ಚುತ್ತದೆ. ಇದರಿಂದ 2 ಹೊಸ ತಂಡಗಳ ಸೇರ್ಪಡೆಯಾದರೂ, ಟೂರ್ನಿಯ ಗುಣಮಟ್ಟಕ್ಕೂ ಹೊಡೆತ ಬೀಳುವುದಿಲ್ಲ ಎಂಬ ಬಗ್ಗೆ ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿದೆ.
ಈಗಾಗಲೆ ಟೂರ್ನಿಗೆ ಆಗಮಿಸುವ ಕೆಲ ವಿದೇಶಿ ಸ್ಟಾರ್ ಆಟಗಾರರು, ತಂಡದ ಸೀಮಿತ ಪರಿಧಿಯಲ್ಲಿ ಆಡುವ ಅವಕಾಶ ಸಿಗದೆ ಬೆಂಚು ಕಾಯಿಸುತ್ತಿದ್ದಾರೆ. ಪ್ರತಿ ತಂಡದ ವಿದೇಶಿ ಕೋಟಾ ಹೆಚ್ಚಿಸಿದರೆ ಅವರಿಗೂ ಅವಕಾಶ ಸಿಗಲಿದೆ. ತಂಡದ ಸಮತೋಲನವೂ ಹೆಚ್ಚಲಿದೆ ಎಂದು ಬಿಸಿಸಿಐ ಅಧಿಕಾರಿ ವಿವರಿಸಿದ್ದಾರೆ.
ಆದರೆ ಐಪಿಎಲ್ ಎಂದರೆ ಭಾರತೀಯ ಟೂರ್ನಿ. ದೇಶದ ದೇಶೀಯ ಆಟಗಾರರಿಗೂ ಹೆಚ್ಚಿನ ಅವಕಾಶ ಒದಗಿಸುವ ದೃಷ್ಟಿಯಿಂದ ಇದು ಪ್ರಮುಖ ಟೂರ್ನಿಯಾಗಿದೆ. ಹೀಗಾಗಿ ವಿದೇಶಿ ಆಟಗಾರರ ಸಂಖ್ಯೆ ಏರಿಸುವ ಪ್ರಸ್ತಾಪಕ್ಕೆ ಬಿಸಿಸಿಐ ವಲಯದಲ್ಲೇ ಒಮ್ಮತದ ಬೆಂಬಲ ಸಿಗುವುದೇ ಎಂಬ ಅನುಮಾನಗಳೂ ಇವೆ ಎನ್ನಲಾಗಿದೆ.