ಧರ್ಮಶಾಲಾ: ಆರ್. ಅಶ್ವಿನ್ ರಾಜ್ಕೋಟ್ ಟೆಸ್ಟ್ನ 2ನೇ ದಿನದಾಟದಲ್ಲಿ ಭಾರತ ಪರ 500 ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿದ ಬೆನ್ನಲ್ಲೇ, ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಮನನ್ನು ನೋಡಲು ಚೆನ್ನೈಗೆ ಪ್ರಯಾಣಿಸಿದ್ದರು. ಬಳಿಕ ಮರಳಿ ಬಂದು 4ನೇ ದಿನದಾಟದಲ್ಲಿ ಮತ್ತೆ ಕಣಕ್ಕಿಳಿದು ಬೌಲಿಂಗ್ ಮಾಡಲು ಅವರ ಅಮ್ಮ ಚಿತ್ರಾ ರವಿಚಂದ್ರನ್ ಸೂಚನೆಯೇ ಕಾರಣವಂತೆ!
ಐಸಿಯುನಲ್ಲಿದ್ದ ಅಮ್ಮ, ಅಶ್ವಿನ್ರನ್ನು ನೋಡಿ ಮೊದಲಗೆ ಕೇಳಿದ ಪ್ರಶ್ನೆ, "ನೀನೇಕೆ ಇಲ್ಲಿಗೆ ಬಂದೆ?'. ಟೆಸ್ಟ್ ಪಂದ್ಯ ನಡೆಯುತ್ತಿದೆಯಲ್ಲ, ನೀನು ಮತ್ತೆ ಅಲ್ಲಿಗೆ ಹೋಗು ಎಂದವರು ಸೂಚಿಸಿದರು ಎಂದು ಅಶ್ವಿನ್, 100ನೇ ಟೆಸ್ಟ್ ಪಂದ್ಯದ ಸಂಭ್ರಮದ ನಡುವೆ ತಿಳಿಸಿದ್ದಾರೆ.
ನಾನೀಗ ನನ್ನ ತಂದೆಯ ಕನಸಿನಂತೆ ಕ್ರಿಕೆಟ್ ಆಡುತ್ತಿದ್ದೇನೆ. ಅವರೂ ಕ್ರಿಕೆಟಿಗನಾಗಲು ಬಯಸಿದ್ದರು. ಮದುವೆಯಾದ ಬಳಿಕ ಅವರಿಗೆ ಕುಟುಂಬದ ಜವಾಬ್ದಾರಿ ಬಂದಿತು. ಆಗ ಹುಟ್ಟಿದ ಮಗನಿಂದ ತನ್ನ ಕ್ರಿಕೆಟ್ ಕನಸು ನನಸಾಗಿಸಲು ಪ್ರಯತ್ನಿಸಿದರು. ನಾನು ಕ್ರಿಕೆಟ್ನತ್ತ ಹೆಚ್ಚಿನ ಗಮನಹರಿಸಲು ನೆರವಾಗುವ ಸಲುವಾಗಿ ನನ್ನ ಶಿಕ್ಷಣದ ವಿಷಯದಲ್ಲೂ ಸಾಕಷ್ಟು ನೆರವು ನೀಡಿದ್ದಾರೆ. ನನ್ನ ಸಹಪಾಠಿಗಳಿಂದ ಅವರೇ ನೋಟ್ಸ್ ತಂದುಕೊಡುತ್ತಿದ್ದರು ಎಂದು ಅಶ್ವಿನ್ ಹೇಳಿದ್ದಾರೆ. ಅವರ ತಂದೆ ರವಿಚಂದ್ರನ್ ಕ್ಲಬ್ ಕ್ರಿಕೆಟಿಗರಾಗಿದ್ದರು. ಕ್ರಿಕೆಟ್ ನೋಡುವುದನ್ನು ಅಪಾರವಾಗಿ ಇಷ್ಟಪಡುವ ಅವರು ಈಗಲೂ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಮೊದಲ ಡಿವಿಷನ್ ಲೀಗ್ ಪಂದ್ಯಗಳಿಗೂ ಹಾಜರಾಗುತ್ತಾರೆ.