ನವದೆಹಲಿ: ಅ.19ರಂದು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಖಾಡಕ್ಕಿಳಿದ ವಿರಾಟ್ ಕೊಹ್ಲಿ (IND vs AUS ODI ), ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದದ್ದು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ. ದಾಖಲೆಗಳ ಸರದಾರ, ರನ್ ಮಷಿನ್ ಎಂದೇ ಕ್ರಿಕೆಟ್ ಲೋಕವನ್ನು ಆಳುತ್ತಿರುವ ವಿರಾಟ್, ಮೊದಲ ಮ್ಯಾಚ್ನಲ್ಲೇ ವಿಫಲವಾಗಿದ್ದು ಇದೀಗ ಮಾಜಿ ಕ್ರಿಕೆಟಿಗರ ಟೀಕೆ, ವ್ಯಂಗ್ಯ ಮತ್ತು ಕಿವಿಮಾತುಗಳಿಗೆ ಕಾರಣವಾಗಿದೆ.
ಭಾರತ ತಂಡಕ್ಕೆ ಆಸೀಸ್ ಸರಣಿ ಮೂಲಕ ಕಮ್ಬ್ಯಾಕ್ ಮಾಡಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲೇ ಕಳಪೆ ಪ್ರದರ್ಶನ ತೋರಿದರು. ರೋಹಿತ್ 8 ರನ್ ಗಳಿಸಿದರೆ, ವಿರಾಟ್ ಶೂನ್ಯಕ್ಕೆ ಔಟಾದರು. 21.1 ಓವರ್‌ಗಳಲ್ಲಿ ಭಾರತ ನೀಡಿದ 131 ರನ್‌ಗಳ ಗುರಿಯನ್ನು ಪೂರ್ಣಗೊಳಿಸಿದ ಆಸ್ಟ್ರೇಲಿಯಾ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ಬೀಗಿತು ಎಂದರು. ಇವರಿಬ್ಬರ ತಯಾರಿ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನಿಸಿದ್ದಾರೆ.
"ವಿರಾಟ್ ಮತ್ತು ರೋಹಿತ್ ಏಕದಿನ ಸರಣಿಗೆ ಆಯ್ಕೆಯಾದ ಬಳಿಕ ಪೂರ್ವತಯಾರಿ ನಡೆಸಲು ಮೊದಲೇ ಆಸ್ಟ್ರೇಲಿಯಾಗೆ ಪ್ರಯಾಣಿಸಬೇಕಿತ್ತು. ಮೊದಲ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್ ಆಟವನ್ನು ನೋಡಿದಾಗ ಇವರಿಬ್ಬರೂ ಲಯ ತಪ್ಪಿದ್ದಾರೆ ಎಂಬುದು ಸ್ಪಷ್ಟ. ಇಬ್ಬರು ಆಸ್ಟ್ರೇಲಿಯಾವನ್ನು ಮೊದಲೇ ತಲುಪುವ ಅವಕಾಶವನ್ನು ಹೊಂದಿದ್ದರು. ಆದರೆ, ಕ್ರಿಕೆಟ್ ಪ್ರೇಮಿಗಳು ಅವರ ಬೆನ್ನಹಿಂದೆಯೇ ಇರುವುದರಿಂದ ತಂಡದೊಂದಿಗೆ ಪ್ರಯಾಣಿಸುವ ಬಗ್ಗೆ ಯೋಚಿಸಿದ್ದರು. ವಿರಾಟ್ ಇಂಗ್ಲೆಂಡ್‌ಗೆ ಶಿಫ್ಟ್ ಆಗಿರುವುದು ಸದ್ಯ ಒತ್ತಡಕ್ಕೆ ಸಿಲುಕಿದಂತೆ ತೋರಿದೆ" ಎಂದಿದ್ದಾರೆ.
"ಇಬ್ಬರಿಗೂ 8ರಿಂದ 10 ದಿನಗಳ ಹಿಂದೆಯೇ ಆಸೀಸ್ಗೆ ಹೋಗುವ ಅವಕಾಶವಿತ್ತು. ಆದರೆ, ಹೋಗಲಿಲ್ಲ. ನೀವೆಷ್ಟೇ ದೊಡ್ಡ ಬ್ಯಾಟ್ಸ್‌ಮನ್ ಆಗಿದ್ದರೂ, ಇದು ಲಯ ಕಂಡುಕೊಳ್ಳುವ ಆಟ. ನೀವು ಫಾರ್ಮ್ನಲ್ಲಿ ಇಲ್ಲದಿದ್ದರೆ ಆಸೀಸ್ನಂತಹ ತಂಡವು ನಿಮ್ಮನ್ನು ಬಿಡುವುದಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).