ಕ್ರೀಡೆ

ಕ್ರಿಕೆಟಿಗ ಮೊಹಮದ್ ಶಮಿ ಪತ್ನಿಗೆ ಬೆದರಿಕೆ...!

ಕೋಲ್ಕತ: ಭಾರತ ತಂಡದ ವೇಗ ಬೌಲರ್ ಮೊಹಮದ್ ಶಮಿ ಪತ್ನಿ ಹಸಿನ್ ಜಹಾನ್‌ಗೆ ಬೆದರಿಕೆ ಹಾಕಿದ್ದ 25 ವರ್ಷದ ವ್ಯಕ್ತಿಯನ್ನು ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಜಹಾನ್ ನೀಡಿದ ದೂರಿನನ್ವಯ ಕ್ಯಾನ್ನಿಂಗ್ ಸ್ಟೇಷನ್ ರಸ್ತೆಯ ಪ್ರದೇಶದಿಂದ ಬಂಧಿಸಲಾಗಿದ್ದು, ಕಳೆದ ಎರಡು ತಿಂಗಳಿಂದ ಹಲವು ಬಾರಿ ಜಹಾನ್‌ಗೆ ಬೆದರಿಕೆ ಹಾಕಿ, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಹಾನ್ ಅವರ ಮಾಜಿ ಕೆಲಸದಾಕೆ ´ಫೋನ್ ಮಾಡಿ, ಹಣಕ್ಕಾಗಿ ಪೀಡಿಸುತ್ತಿದ್ದಳು. ಇದೀಗ ಮಹಿಳೆ ಮಗ ಕೂಡ ಇದರಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕ್ಕಾಗಿ ಪೀಡಿಸಿ, ಬೆದರಿಕೆ ಹಾಕುತ್ತಿದ್ದರು. ಹಣ ನೀಡದಿದ್ದರೆ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತೇನೆ ಎಂದು ವೈಯಕ್ತಿಕವಾಗಿ ನಿಂಧಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭಿಕ ಹಂತದಲ್ಲಿ ಜಹಾನ್ ಫೋನ್ ಕರೆಗಳ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ದಿನಗಳೆದಂತೆ ಬೆದರಿಕೆ ಕರೆಗಳು ಅತಿಯಾದ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಜಹಾನ್‌ಗೆ ಕರೆ ಬಂದಿರುವ ಎರಡು ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ ಬಳಿಕ ತನಿಖೆ ಆರಂಭಿಸಲಾಯಿತು. ಇದೀಗ ನಾಪತ್ತೆಯಾಗಿರುವ ಮಹಿಳೆ ಪತ್ತೆಗೂ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ವೇಗಿ ಮೊಹಮದ್ ಶಮಿ ಹಾಗೂ ಜಹಾನ್ ನಡುವಿನ ಸಂಬಂಧ ಹದಗೆಟ್ಟಿದೆ. ಸದ್ಯ ಶಮಿಯಿಂದ ದೂರ ಉಳಿದಿರುವ ಜಹಾನ್, ರಕ್ಷಣೆ ಕೋರಿ ಕೋಲ್ಕತ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.