ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ ಮಿಂಚಿದ ಹಿರಿಯ ವೇಗಿ ಮೊಹಮದ್ ಶಮಿ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದ 2 ಪಂದ್ಯಗಳ ಟೆಸ್ಟ್ ಸರಣಿಗೆ ಫಿಟ್ ಆಗುವುದು ಅನುಮಾನವೆನಿಸಿದೆ. ನವೆಂಬರ್ 30ರಂದು ಪ್ರಕಟಿಸಲಾದ ಭಾರತ ಟೆಸ್ಟ್ ತಂಡದಲ್ಲಿ 33 ವರ್ಷದ ಶಮಿ ಸ್ಥಾನ ಪಡೆದಿದ್ದಾರೆ. ಆದರೆ ಪೂರ್ಣ ಚೇತರಿಕೆ ಕಂಡರೆ ಮಾತ್ರ ಆಡುತ್ತಾರೆ ಎಂದು ಬಿಸಿಸಿಐ ತಿಳಿಸಿತ್ತು.
ಡಿಸೆಂಬರ್ 26ರಿಂದ ಸೆಂಚುರಿಯನ್ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಸಹಿತ ಟೆಸ್ಟ್ ತಂಡದ ಆಟಗಾರರು ಶುಕ್ರವಾರ ಜೊಹಾನ್ಸ್ರ್ಬಗ್ಗೆ ವಿಮಾನ ಏರಲಿದ್ದಾರೆ. ಆದರೆ ಶಮಿ ಅವರೊಂದಿಗೆ ತೆರಳುವುದು ಅನುಮಾನವೆನಿಸಿದೆ. ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಭಾರತ ಎ ತಂಡದ ಪರ ಆಡುತ್ತಿರುವ ಯುವ ವೇಗಿಗಳಲ್ಲೇ ಯಾರಾದರೊಬ್ಬರನ್ನು ಶಮಿ ಬದಲಿಗೆ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ.
ಮುಂದಿನ ವರ್ಷ ಜನವರಿ 25ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದರಲ್ಲಿ ಶಮಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಶಮಿ ಮೊಣಕಾಲು ನೋವಿನ ನಡುವೆಯೇ ವಿಶ್ವಕಪ್ನಲ್ಲಿ ಆಡಿದ್ದರು. 7 ಪಂದ್ಯಗಳಲ್ಲೇ 24 ವಿಕೆಟ್ ಕಬಳಿಸಿದ್ದ ಅವರು, ಬೌಲಿಂಗ್ ರನ್ಅಪ್ನಲ್ಲಿ ಚೆಂಡೆಸೆಯುವ ಹಂತದಲ್ಲಿ ಬಲಗಾಲನ್ನು ನೆಲದ ಮೇಲಿಡುವ ವೇಳೆ ನೋವು ಅನುಭವಿಸುತ್ತಿದ್ದರು ಎನ್ನಲಾಗಿದೆ.
ರಬಾಡ, ಬವುಮಾ ಡೌಟ್
ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ. ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಇವರಿಬ್ಬರು, ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಗುರುವಾರ ದೇಶೀಯ ಪ್ರಥಮ ದರ್ಜೆ ಪಂದ್ಯದಲ್ಲಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಇಬ್ಬರೂ ಪಂದ್ಯದಲ್ಲಿ ಆಡುತ್ತಿಲ್ಲ. ರಬಾಡ ಫಿಟ್ನೆಸ್ ಸಮಸ್ಯೆ ಹೊಂದಿದ್ದರೆ, ಬವುಮಾ ವೈಯಕ್ತಿಕ ಕಾರಣದಿಂದಾಗಿ ಆಡುತ್ತಿಲ್ಲ ಎನ್ನಲಾಗಿದೆ. ಪ್ರಮುಖವಾಗಿ ರಬಾಡ ಗೈರು ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತವಾಗಲಿದೆ. ಈಗಾಗಲೆ ಅನ್ರಿಚ್ ನೋಕಿಯಾ ಅಲಭ್ಯರಾಗಿದ್ದರೆ, ಲುಂಗಿ ಎನ್ಗಿಡಿ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರಮುಖ ಮೂವರು ವೇಗಿಗಳಿಲ್ಲದೆ ಆಡುವ ಸವಾಲು ಹರಿಣಗಳಿಗೆ ಎದುರಾಗಲಿದೆ.