ಇಸ್ಲಮಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಪಾಕಿಸ್ತಾನ ( Pakistan ) ಕ್ರಿಕೆಟ್ ಮಂಡಳಿ (ಪಿಸಿಬಿ) ಒಂದು ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ, ಏಕದಿನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಪಿಸಿಬಿ ವಜಾಗೊಳಿಸಿದೆ. ಆ ಸ್ಥಾನಕ್ಕೆ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಶಾಹೀನ್ ಅಫ್ರಿದಿ ಅವರು ಪಾಕಿಸ್ತಾನ ಏಕದಿನ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡ ಒಂದೇ ಒಂದು ಪಂದ್ಯವನ್ನು ಸಹ ಗೆಲ್ಲಲಿಲ್ಲ. ಇದಿಷ್ಟೇ ಅಲ್ಲದೆ, ಮೆನ್ ಇನ್ ಗ್ರೀನ್ ತಂಡ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಸಹ ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ ಪಿಸಿಬಿ, ರಿಜ್ವಾನ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದೆ.
ಪಾಕಿಸ್ತಾನದ ಹಿರಿಯ ಆಯ್ಕೆ ಸಮಿತಿ ಸೋಮವಾರ (ಅ.20) ಸಭೆ ಸೇರಿತು. ವೈಟ್ ಬಾಲ್ ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಈ ಸಭೆಯಲ್ಲಿ ಹಾಜರಿದ್ದರು. ಶಾಹೀನ್ ಶಾ ಅಫ್ರಿದಿ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಈ ವೇಳೆ ನೇಮಿಸಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶಾಹೀನ್ ಅವರು ಪಾಕಿಸ್ತಾನ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ನಿರ್ಧಾರದೊಂದಿಗೆ ಪಾಕಿಸ್ತಾನ ತಂಡವು ಈಗ ಮೂರು ಸ್ವರೂಪಗಳಲ್ಲಿ ವಿಭಿನ್ನ ನಾಯಕರನ್ನು ಹೊಂದಿದೆ. ಶಾನ್ ಮಸೂದ್ ಪಾಕಿಸ್ತಾನದ ಟೆಸ್ಟ್ ತಂಡದ ನಾಯಕರಾಗಿದ್ದರೆ, ಸಲ್ಮಾನ್ ಅಲಿ ಆಘಾ ಟಿ20 ನಾಯಕರಾಗಿದ್ದಾರೆ ಮತ್ತು ಶಾಹೀನ್ ಏಕದಿನ ತಂಡದ ನಾಯಕರಾಗಿದ್ದಾರೆ. ಶಾಹೀನ್ ಅವರನ್ನು ಈ ಹಿಂದೆ ಟಿ20 ನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ, ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 1-4 ಅಂತರದಿಂದ ಸೋತ ನಂತರ, ಆಯ್ಕೆದಾರರು ಶಾಹೀನ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದರು.
ಆಫ್ರಿದಿ ಈಗ 50 ಓವರ್‌ಗಳ ಸ್ವರೂಪದಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. 25 ವರ್ಷದ ಶಾಹೀನ್ ಪಾಕಿಸ್ತಾನ ಪರ 66 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 131 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಹೀನ್ ಅವರು ಪಾಕ್ ದಿಗ್ಗಜ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅವರ ಅಳಿಯ. (ಏಜೆನ್ಸೀಸ್)