ಕ್ರೀಡೆ

VIDEO: ಆರ್.ಅಶ್ವಿನ್ ಶತಕಕ್ಕೆ ಮೊಹಮದ್ ಸಿರಾಜ್ ಸಂಭ್ರಮ ಹೀಗಿತ್ತು ಗೊತ್ತಾ?

ಚೆನ್ನೈ: ತವರು ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಸಂಭ್ರಮದಲ್ಲಿರುವ ಭಾರತ ತಂಡದ ಯುವ ವೇಗಿ ಮೊಹಮದ್ ಸಿರಾಜ್ ಸೋಮವಾರ ಟ್ರೋಲಿಗರ ಫೇವರಿಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸಹ ಆಟಗಾರ ಆರ್.ಅಶ್ವಿನ್ ಶತಕ ಸಿಡಿಸಿದ್ದ ವೇಳೆ ಮೈದಾನದಲ್ಲಿ ಸಿರಾಜ್ ಸಂಭ್ರಮಿಸಿದ ರೀತಿಯೇ ಅಭಿಮಾನಿಗಳ ಮನಗೆದ್ದಿದೆ. ಅಶ್ವಿನ್ ಶತಕಕ್ಕೆ 10ನೇ ವಿಕೆಟ್‌ಗೆ 49 ರನ್ ಜತೆಯಾಟವಾಡಿದರು. ಸಿರಾಜ್ ಕ್ರೀಸ್‌ಗಿಳಿಯುವ ವೇಳೆ ಅಶ್ವಿನ್ ಶತಕ ಪೂರೈಸಲು ಇನ್ನು 18 ರನ್‌ಗಳ ಅವಶ್ಯಕತೆಯಿತ್ತು. ಇದರಿಂದಾಗಿ ಅಶ್ವಿನ್ ಶತಕ ಪೂರೈಸುವುದೇ ಅನುಮಾನ ಮೂಡಿತು. ಇಂಥ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ ಸಿರಾಜ್, ಅಶ್ವಿನ್‌ಗೆ ಅಗತ್ಯ ಸಾಥ್ ನೀಡುವ ಮೂಲಕ ಗಮನಸೆಳೆದರು.

ಆಶ್ವಿನ್ ಶತಕ ಪೂರೈಸಿದ ಬೆನ್ನಲ್ಲೇ ಸಿರಾಜ್ ಕೂಡ ತಾವೇ ಶತಕ ಸಿಡಿಸಿದವರಂತೆ ಸಂಭ್ರಮಿಸಿದರು. ಅಲ್ಲದೆ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು. 21 ಎಸೆತಗಳಲ್ಲಿ 16 ರನ್‌ಗಳಿಸಿ ಅಜೇಯರಾಗಿ ಉಳಿದರು. ಸಿರಾಜ್ ಕ್ರೀಡಾ ಸ್ಫೂರ್ತಿಗೆ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಶ್ವಿನ್‌ಗಿಂತ ಸಿರಾಜ್ ಅವರೇ ಶತಕವನ್ನು ಸಂಭ್ರಮಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಕೆಲಮಂದಿ ಬರೆದುಕೊಂಡಿದ್ದಾರೆ. ಭಾರತ ತಂಡ 482 ರನ್ ಗೆಲುವಿನ ಗುರಿ ನೀಡಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 3 ವಿಕೆಟ್‌ಗೆ 53 ರನ್‌ಗಳಿಸಿದ್ದು, ಇನ್ನು 429 ರನ್ ಪೇರಿಸಬೇಕಿದೆ.