ಕ್ರೀಡೆ

6,6,6,6,6,6... ಟಿ20 ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದು ಇತಿಹಾಸ ಬರೆದ ಆಸಿಸ್​ ಆಲ್​ರೌಂಡರ್! Mitchell Owen

Mitchell Owen : ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸುಲಭ ಗೆಲುವು ಸಾಧಿಸಿದೆ. ಭಾನುವಾರ (ಜುಲೈ 20) ಜಮೈಕಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯರನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಆಸ್ಟ್ರೇಲಿಯಾ ತಂಡವು ಮೂರು ಟೆಸ್ಟ್ ಮತ್ತು ಐದು ಟಿ20 ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‌ಗೆ ತೆರಳಿದೆ. ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಕಾಂಗರೂಗಳು, ಟಿ20 ಸರಣಿಯಲ್ಲೂ ಉತ್ತಮ ಆರಂಭವನ್ನು ಮಾಡಿದ್ದಾರೆ. ಸಬೀನಾ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ಬಂದ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ (18) ಆರಂಭದಲ್ಲಿ ವಿಕೆಟ್​ ಒಪ್ಪಿಸಿದರು.

ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ಹಾಗೂ ನಾಯಕ ಶೈ ಹೋಪ್ (39 ಎಸೆತಗಳಲ್ಲಿ 55 ರನ್​) ಮತ್ತು ಒನ್-ಡೌನ್ ಬ್ಯಾಟ್ಸ್‌ಮನ್ ರೋಸ್ಟನ್ ಚೇಸ್ (60) ಅರ್ಧಶತಕ ಗಳಿಸಿದರು. ಶಿಮ್ರಾನ್ ಹೆಟ್ಮೆಯರ್ (19 ಎಸೆತಗಳಲ್ಲಿ 38) ಕೊನೆಯಲ್ಲಿ ಅಬ್ಬರಿಸಿದರು. ಪರಿಣಾಮವಾಗಿ, ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು.

ಆಸ್ಟ್ರೇಲಿಯಾ ಬೌಲರ್‌ಗಳಲ್ಲಿ ದ್ವಾರ್ಶುಯಿಸ್ ನಾಲ್ಕು ವಿಕೆಟ್ ಪಡೆದರೆ, ಸೀನ್ ಅಬಾಟ್, ಕೂಪರ್ ಕಾನೊಲಿ, ನಾಥನ್ ಎಲ್ಲಿಸ್ ಮತ್ತು ಚೊಚ್ಚಲ ಆಟಗಾರ ಮಿಚೆಲ್ ಓವನ್ ತಲಾ ಒಂದು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಮಾರ್ಷ್ ಪಡೆ ಕೇವಲ 18.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು.

ನಾಯಕ ಮಿಚೆಲ್ ಮಾರ್ಷ್ (24) ಸಾಧಾರಣ ಪ್ರದರ್ಶನ ನೀಡಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮೆಗ್ಗಾರ್ಕ್ (2) ಮತ್ತು ಒನ್ ಡೌನ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ (18) ನಿರಾಶೆ ಮೂಡಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ (11) ಕೂಡ ವಿಫಲರಾದರು. ಬಳಿಕ ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಓವನ್ ಮಿಂಚಿನ ಅರ್ಧಶತಕಗಳೊಂದಿಗೆ ಗೆಲುವು ತಂದುಕೊಟ್ಟರು. ಗ್ರೀನ್ 26 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 51 ರನ್ ಗಳಿಸಿದರೆ, ಮಿಚೆಲ್ ಓವನ್ 27 ಎಸೆತಗಳಲ್ಲಿ ಆರು ಸಿಕ್ಸರ್‌ಗಳ ಸಹಾಯದಿಂದ 50 ರನ್ ಗಳಿಸಿದರು.

ಇತರರಲ್ಲಿ, ಕೂಪರ್ ಕಾನೊಲಿ 13 ರನ್ ಗಳಿಸಿದರೆ, ದ್ವಾರ್ಶುಯಿಸ್ (5) ಮತ್ತು ಸೀನ್ ಅಬಾಟ್ (5) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ವಿಕೆಟ್‌ಗಳ ಜಯ ಸಾಧಿಸಿತು.

ಇದೇ ವೇಳೆ ಐಪಿಎಲ್-2025ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಮಿಚೆಲ್ ಓವನ್, ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 23 ವರ್ಷದ ಬ್ಯಾಟಿಂಗ್ ಆಲ್‌ರೌಂಡರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದರು. ಇದಲ್ಲದೆ, ಓವನ್​ ಆಸೀಸ್ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. (ಏಜೆನ್ಸೀಸ್​)