ಕ್ರೀಡೆ

VIDEO| ಬೆಳ್ಳಿ ಗೆದ್ದ ಮೀರಾಬಾಯಿ ಭಾರತಕ್ಕೆ ವಾಪಸ್: ಏರ್​ಪೋರ್ಟ್​ನಲ್ಲಿ ಸಿಕ್ತು ಭರ್ಜರಿ ಸ್ವಾಗತ

ನವದೆಹಲಿ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚಾನು ಇಂದು ಭಾರತಕ್ಕೆ ಮರಳಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ರೀಡಾಪಟುಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಮೀರಾಗೆ ಸನ್ಮಾನ ಮಾಡಿ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಮೀರಾಬಾಯಿ ಅವರು ನಿಲ್ದಾಣದಲ್ಲಿ ನಡೆದು ಬರುವಾಗ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಅವರು ಟ್ವಿಟ್ಟರ್​ನಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದು, 'ಪ್ರೀತಿ ಮತ್ತು ಬೆಂಬಲದ ನಡುವೆ ಇಲ್ಲಿಗೆ ಮರಳಲು ಸಂತೋಷವಾಗಿದೆ, ತುಂಬಾ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ಬೆಳ್ಳಿ ಪದಕದೊಂದಿಗೆ ದೇಶಕ್ಕೆ ಮರಳಿದ ಮೀರಾಗೆ ವಿಶೇಷ ರಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ಅವರು ಏರ್​ಪೋರ್ಟ್​ನಿಂದ ಹೊರಗೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅನೇಕರು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)