ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಐಸಿಸಿ ಹೊಸದಾಗಿ ನಿಗದಿಪಡಿಸಿರುವ ಕನಿಷ್ಠ ವಯಸ್ಸೆಷ್ಟು ಗೊತ್ತೇ?

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಲು ಆಟಗಾರರಿಗೆ ಕನಿಷ್ಠ ವಯಸ್ಸನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಿಗದಿಪಡಿಸಿದೆ. ಇದರನ್ವಯ ಇನ್ನು ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಲು ಕನಿಷ್ಠ 15 ವರ್ಷ ಆಗಿರಬೇಕು. ಪುರುಷರ ಮತ್ತು ಮಹಿಳಾ ಕ್ರಿಕೆಟ್ ಮಾತ್ರವಲ್ಲದೆ 19 ವಯೋಮಿತಿ ಕ್ರಿಕೆಟ್ ಪಂದ್ಯಗಳಿಗೂ ಈ ಕನಿಷ್ಠ ವಯಸ್ಸಿನ ನಿಯಮ ಅನ್ವಯಿಸಲಿದೆ.

ಆದರೆ ಕೆಲ ವಿಶೇಷ ಸಂದರ್ಭಗಳಲ್ಲಿ ದೇಶಗಳಿಗೆ 15 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಆಟಗಾರರನ್ನು ಕಣಕ್ಕಿಳಿಸಲು ಐಸಿಸಿ ಅವಕಾಶವನ್ನೂ ನೀಡಿದೆ. ಇದಕ್ಕಾಗಿ ಆಯಾ ದೇಶದ ಕ್ರಿಕೆಟ್ ಮಂಡಳಿಗಳು ಐಸಿಸಿಯಿಂದ ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂಥ ಸಮಯದಲ್ಲಿ ಐಸಿಸಿ ಆ ಆಟಗಾರರ ಅನುಭವ, ಮಾನಸಿಕ ಬೆಳವಣಿಗೆ ಮತ್ತು ದೈಹಿಕ ಸಾಮರ್ಥ್ಯಗಳನ್ನು ಪರಿಶೀಲಿಸಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುವ ಸಾಮರ್ಥ್ಯ ಅವರಲ್ಲಿದೆಯೇ ಎಂಬುದನ್ನು ತೀರ್ಮಾನಿಸಿ ಅವಕಾಶ ಕಲ್ಪಿಸಲಿದೆ.

ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಕನಿಷ್ಠ ವಯೋಮಿತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಐಸಿಸಿ ತಿಳಿಸಿದೆ. ಈ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಯಾವುದೇ ವಯಸ್ಸಿನ ನಿರ್ಬಂಧ ಇರಲಿಲ್ಲ.

ಪಾಕಿಸ್ತಾನದ ಹಸನ್ ರಾಜಾ 1996ರಲ್ಲಿ 14 ವರ್ಷ, 227 ದಿನ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 7 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ಬಲಗೈ ಬ್ಯಾಟ್ಸ್‌ಮನ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದು, ಇನ್ನು ಮುಂದೆ ಈ ದಾಖಲೆ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಟಿ20 ಕ್ರಿಕೆಟ್‌ನಲ್ಲೂ ರೊಮೇನಿಯಾ (ಎಂ. ಗೆರಸಿಮ್) ಮತ್ತು ಕುವೈಟ್ (ಭವ್ಸರ್) ತಂಡಗಳ ಪರ 14 ವರ್ಷ ವಯಸ್ಸಿನ ಆಟಗಾರರು ಆಡಿದ್ದರು.

ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದವರಲ್ಲಿ ಸಚಿನ್ ತೆಂಡುಲ್ಕರ್ ಅತ್ಯಂತ ಕಿರಿಯರಾಗಿದ್ದಾರೆ. ಅವರು 16 ವರ್ಷ, 205 ದಿನ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.