ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ಟೂರ್ನಿಗೆ ಸಂಬಂಧಿಸಿದ ತಯಾರಿಯನ್ನು ಆರಂಭಿಸಿದೆ. 18ನೇ ಆವೃತ್ತಿಯಲ್ಲಿ ಕಪ್ ಗೆಲ್ಲಲೇಬೇಕೆಂದು ಫ್ರಾಂಚೈಸಿಗಳು ಬಲಿಷ್ಠ ತಂಡವನ್ನೇ ಕಟ್ಟಿದ್ದು, ಆರ್ಸಿಬಿ ತಂಡ ಕೂಡ ಒಂದಾಗಿದೆ. ಅಭಿಮಾನಿಗಳು ಬಹುವರ್ಷದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರ್ಸಿಬಿ (RCB) ಫ್ರಾಂಚೈಸಿಯು ಈ ಬಾರಿಯ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದು, ಬಲಿಷ್ಠ ಪಡೆಯನ್ನ ಕಟ್ಟುವ ಮೂಲಕ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ.
ಇನ್ನೂ ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ (RCB) ಹಾಗೂ ಚೆನ್ನೈ (CSK) ಪ್ರಾಂಚೈಸಿಗಳು ಬದ್ಧವೈರರಿಗಳೆಂದು ಪರಿಗಣಿಸಿದ್ದು, ಪ್ರತಿಬಾರಿ ಹೈವೊಲ್ಟೇಜ್ ಪಂದ್ಯ ನಡೆದಾಗಲೆಲ್ಲಾ ಟಿಆರ್ಪಿ ಹಾಗೂ ವೀಕ್ಷಣೆ ವಿಚಾರವಾಗಿ ದಾಖಲೆ ಬರೆದಿದೆ. ಆದರೆ, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಆರ್ಸಿಬಿ ಅಭಿಮಾನಿಗಳನ್ನು ಅವಮಾನಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಎಸ್ಕೆ ನಾಯಕ ಋತುರಾಜ್ (Ruturaj Gaikwad) ಅವರನ್ನು ಮಾತನಾಡುವಂತೆ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಋತುರಾಜ್ಗೆ ಪ್ರಶ್ನಗೆಳನ್ನು ಕೇಳಲಾಗಿತ್ತು. ಪ್ರಶ್ನೆಗೆ ಉತ್ತರಿಸಲು ಮುಂದಾದಾಗ ಋತುರಾಜ್ ಅವರ ಮೈಕ್ ಆಪ್ ಆಗಿತ್ತು. ಇದರಿಂದ ಋತುರಾಜ್ಗೆ ತೀವ್ರ ಇರುಸುಮುರುಸು ಉಂಟಾಯಿತು.
ಈ ವಿಚಾರವಾಗಿ ನಿರೂಪಕರು ಮೈಕ್ ಆಪರೇಟರ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರಿಸಿದ ಋತುರಾಜ್ ಬಹುಶಃ ಅವರು ಆರ್ಸಿಬಿಯಿಂದ (RCB) ಬಂದಿರಬೇಕು ಹೇಳಿದ್ದಾರೆ. ಈ ವಿಡಿಯೋ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಋತುರಾಜ್ ವಿರುದ್ಧ ಸಮರ ಸಾರಿಸಿದ್ದಾರೆ. ಅನೇಕರು ಋತುರಾಜ್ರನ್ನು ಟ್ರೋಲ್ ಮಾಡಿದ್ದು, ನಿಮ್ಮ ನಾಯಕತ್ವದಲ್ಲಿ ತಂಡ ಪ್ಲೇಆಫ್ ಕೂಡ ಪ್ರವೇಶಿಸಿಲ್ಲ ಎಂದು ಹೇಳಿದರೆ. ಮತ್ತಷ್ಟು ಜನ ಮೇ 18ರ ಘಟನೆಯನ್ನು ಇವರು ಪರ್ಸನಲ್ ಆಗಿ ತೆಗೆದುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2024ರ ಮೇ 18ರಂದು ಸಿಎಸ್ಕೆ ಹಾಗೂ ಆರ್ಸಿಬಿ ನಡುವಿನ ನಾಕೌಟ್ ಪಂದ್ಯದಲ್ಲಿ ಬೆಂಗಳೂರು ತಂಡವು ಎದುರಾಳಿಗಳ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿತ್ತು. ಪಂದ್ಯದ ಬಳಿಕ ನಡೆದ ಬೆಳವಣಿಗೆಯಲ್ಲಿ ಸಿಎಸ್ಕೆ ಆಟಗಾರರು ಎದುರಾಳಿ ತಂಡದವರಿಗೆ ಹ್ಯಾಂಡ್ ಶೇಕ್ ಮಾಡದೆ ತೆರಳಿದ್ದರು ಎಂಬ ಆರೋಪ ಕೇಳಿ ಬಂದಿತ್ತು.