ಕ್ರೀಡೆ

ಮೈಕೆಲ್​ ಕ್ಲಾರ್ಕ್​ ಕಂಡ ಶ್ರೇಷ್ಠ 7 ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಭಾರತದ ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿಗೆ ಸ್ಥಾನ

ನವದೆಹಲಿ: ಮೈಕೆಲ್​ ಕ್ಲಾರ್ಕ್​ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ನಾಯಕರಾಗಿದ್ದವರು. ತಮ್ಮ ರಾಷ್ಟ್ರಕ್ಕೆ ಏಕದಿನ ವಿಶ್ವಕಪ್​ ಗೆದ್ದಕೊಟ್ಟವರು. ಅವರು ನಿವೃತ್ತರಾಗಿ ಸಾಕಷ್ಟು ಕಾಲ ಸಂದಿದೆ. ಇದೀಗ ಅವರು ತಾವು ಆಡುತ್ತಿದ್ದ ಅವಧಿಯಲ್ಲಿ ತಾವು ಕಂಡ ವಿಶ್ವದ ಅಗ್ರಮಾನ್ಯ 7 ಬ್ಯಾಟ್ಸ್​ಮನ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಭಾರತದ ಕ್ರಿಕೆಟ್​ ದಿಗ್ಗಜ ಶತಕಗಳ ಶತಕವೀರ ಸಚಿನ್​ ತೆಂಡುಲ್ಕರ್​ ಮತ್ತು ಹಾಲಿ ನಾಯಕ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್​ ಇಂಡೀಸ್​ನ ಮಾಜಿ ನಾಯಕ ಬ್ರಿಯಾನ್​ ಲಾರಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​, ದಿಗ್ಗಜ ಆಲ್ರೌಂಡರ್​ ಜಾಕಸ್​ ಕಾಲಿಸ್​, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕರ ಕ್ರಮವಾಗಿ ನಾಲ್ಕರಿಂದ 7ನೇ ಸ್ಥಾನದಲ್ಲಿದ್ದಾರೆ.

ಮೈಕೆಲ್​ ಕ್ಲಾರ್ಕ್​ ಪ್ರಕಾರ ಸಚಿನ್​ ತೆಂಡುಲ್ಕರ್​ ಅವರ ಬ್ಯಾಟಿಂಗ್​ ತಾಂತ್ರಿಕವಾಗಿ ಗಟ್ಟಿಯಾಗಿತ್ತು. ಅವರ ತಾಂತ್ರಿಕತೆಯಲ್ಲಿ ಎಳ್ಳಷ್ಟೂ ಲೋಪಗಳಿರಲಿಲ್ಲ. ಹಾಗಾಗಿ ಅವರನ್ನು ಔಟ್​ ಮಾಡುವುದು ಬಲು ಕಷ್ಟದ ಕೆಲಸವಾಗಿತ್ತು ಎಂದು ಬಣ್ಣಿಸಿದ್ದಾರೆ.
ಸದ್ಯ ಟೆಸ್ಟ್​, ಏಕದಿನ ಮತ್ತು ಟಿ20 ಮಾದರಿಯಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದರೆ ವಿರಾಟ್​ ಕೊಹ್ಲಿ. ಇವರಿಗೆ ಸಚಿನ್​ ತೆಂಡುಲ್ಕರ್​ ಅವರಂತೆ ಮೂರಂಕಿ ಸಾಧನೆ ಮಾಡುವುದು ಎಂದರೆ ಬಲುಪ್ರೀತಿ ಎಂದು ಹೇಳಿದ್ದಾರೆ.

ಎಬಿ ಡಿವಿಲಿಯರ್ಸ್​ ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್​ ಮಾಡುವ ಚಾಕಚಕ್ಯತೆ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ಇವರನ್ನು ಮೀರಿಸುವವರು ಬೇರಾರೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜಾಕಸ್​ ಕಾಲಿಸ್​ ಅವರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದವರು. ರಿಕಿ ಪಾಂಟಿಂಗ್​ ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕರ ಒಬ್ಬ ಜಂಟಲ್​ಮನ್ ಎಂದು ಬಣ್ಣಿಸಿದ್ದಾರೆ.

ಈ ಪಟ್ಟಿಯಲ್ಲಿರುವ ಎಲ್ಲ 7 ಬ್ಯಾಟ್ಸ್​ಮನ್​ಗಳಿಂದ ಪ್ರೇರಿತರಾಗಿ ಮೈಕೆಲ್​ ಕ್ಲಾರ್ಕ್​ ತಮ್ಮ ಬ್ಯಾಟಿಂಗ್​ ಅನ್ನು ಸುಧಾರಿಸಿಕೊಂಡಿದ್ದರು ಎಂದು ಹೇಳಬಹುದು. ಇವರು 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದರು.