ಕ್ರೀಡೆ

ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನೂ ಐಪಿಎಲ್‌ನಿಂದ ಹೊರದಬ್ಬಿದ ಮುಂಬೈ ಇಂಡಿಯನ್ಸ್

ಮುಂಬೈ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಪ್ರದರ್ಶಿಸಿದ ಅಮೋಘ ಬೌಲಿಂಗ್ ದಾಳಿಗೆ ಬೆಚ್ಚಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್ 15ನೇ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿದ್ದ 2ನೇ ತಂಡವೆನಿಸಿತು. ಪ್ಲೇಆಫ್​ ಹಂತಕ್ಕೇರಲು ಉಳಿದಿದ್ದ ಕೂದಲೆಳೆಯ ಆಸೆಯನ್ನು ಜೀವಂತವಿರಿಸಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಿಎಸ್‌ಕೆ ತಂಡ 5 ವಿಕೆಟ್‌ಗಳಿಂದ ಶರಣಾಯಿತು. ಇದರೊಂದಿಗೆ ರೋಹಿತ್ ಶರ್ಮ ಬಳಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವ ಆಸೆಯನ್ನು ವೃದ್ಧಿಸಿಕೊಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡ 16 ಓವರ್‌ಗಳಲ್ಲಿ ಕೇವಲ 97 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 39 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ಸಿಎಸ್‌ಕೆ, ನಾಯಕ ಎಂಎಸ್ ಧೋನಿ (36*ರನ್, 33 ಎಸೆತ, 4 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದಿಂದ ಮೂರಂಕಿ ಸನಿಹ ತಲುಪಿತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ 14.5 ಓವರ್‌ಗಳಲ್ಲಿ 5 ವಿಕೆಟ್‌ಗೆ 103 ರನ್ ಗಳಿಸಿ ಗೆಲುವಿನ ದಡ ಸೇರಿತು.

ಮುಂಬೈಗೆ ಗೆಲುವಿನ ತಿಲಕ

ಅಲ್ಪ ಮೊತ್ತದ ಚೇಸಿಂಗ್ ಆರಂಭಿಸಿದ ಮುಂಬೈ ಕೂಡ ಒಂದು ಹಂತದಲ್ಲಿ 33 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ಇಶಾನ್ ಕಿಶನ್ (6), ರೋಹಿತ್ ಶರ್ಮ (18) ವೈಫಲ್ಯ ಮುಂದುವರಿಯಿತು. ಆಗ ಆಸರೆಯಾದ ತಿಲಕ್ ವರ್ಮ (34*ರನ್, 32 ಎಸೆತ, 4 ಬೌಂಡರಿ) ಇನ್ನೂ 5.1 ಓವರ್‌ಗಳು ಬಾಕಿ ಇರುವಂತೆ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಿಎಸ್‌ಕೆಗೆ ಡೇನಿಯಲ್ ಸ್ಯಾಮ್ಸ್ ಶಾಕ್

ವೇಗಿ ಡೇನಿಯಲ್ ಸ್ಯಾಮ್ಸ್ (16ಕ್ಕೆ 3) ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಕಳೆದ ಪಂದ್ಯದ ಹೀರೋ ಡೆವೊನ್ ಕಾನ್‌ವೇ ಅವರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡಿದರು. ಬಳಿಕ ಮೊಯಿನ್ ಅಲಿ (0), ಋತುರಾಜ್ ಗಾಯಕ್ವಾಡ್ (7) ಅವರನ್ನೂ ಔಟ್ ಮಾಡಿದರು. ಅವರಿಗೆ ಮತ್ತಿಬ್ಬರು ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (12ಕ್ಕೆ 1) ಮತ್ತು ರಿಲೀ ಮೆರಿಡಿತ್ (27ಕ್ಕೆ 2) ಉತ್ತಮ ಸಾಥ್ ನೀಡಿದರು. ರಾಬಿನ್ ಉತ್ತಪ್ಪ (1), ಅಂಬಟಿ ರಾಯುಡು (10), ಶಿವಂ ದುಬೆ (10) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ಧೋನಿ-ಬ್ರಾವೊ 7ನೇ ವಿಕೆಟ್‌ಗೆ 39 ರನ್ ಸೇರಿಸಿದರು. ಇದುವೇ ಸಿಎಸ್‌ಕೆ ಪರ ಅತಿದೊಡ್ಡ ಜತೆಯಾಟ ಎನಿಸಿತು. ಧೋನಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ಹೋರಾಡಿದರೂ, ಸ್ಟ್ರೈಕ್ ಕಾಯ್ದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಕೊನೇ ಬ್ಯಾಟರ್ ಮುಕೇಶ್ ಚೌಧರಿ (4) ರನೌಟ್ ಆಗಿದ್ದರಿಂದ ಆ ಆಸೆಯೂ ಈಡೇರಲಿಲ್ಲ. 15 ಇತರ ರನ್‌ಗಳೇ ಸಿಎಸ್‌ಕೆ ತಂಡಕ್ಕೆ 2ನೇ ಗರಿಷ್ಠ ಕೊಡುಗೆ ಎನಿಸಿತು. ಇದು ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ 2ನೇ ಕನಿಷ್ಠ ಮೊತ್ತವಾಗಿದೆ. 2013ರಲ್ಲಿ ಮುಂಬೈ ವಿರುದ್ಧವೇ 79 ರನ್ ಗಳಿಸಿದ್ದು ಕನಿಷ್ಠವಾಗಿದೆ. ಸಿಎಸ್‌ಕೆ ಐಪಿಎಲ್‌ನಲ್ಲಿ 9ನೇ ಬಾರಿ ಆಲೌಟ್ ಆಯಿತು. ಈ ಪೈಕಿ 5 ಬಾರಿ ಮುಂಬೈ ವಿರುದ್ಧವೇ ಆಗಿದೆ.