ವಡೋದರ: ನಾಯಕ ಮಯಾಂಕ್ ಅಗರ್ವಾಲ್ (124 ರನ್, 112 ಎಸೆತ, 15 ಸಿಕ್ಸರ್, 2 ಬೌಂಡರಿ) ಸಿಡಿಸಿದ ಸತತ ಮೂರನೇ ಶತಕ ನಡುವೆಯೂ ಸ್ಲಾಗ್ ಓವರ್‌ಗಳಲ್ಲಿ ಬೌಲರ್‌ಗಳ ವೈಲ್ಯದಿಂದಾಗಿ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಸೋಲು ಕಂಡಿದೆ. ಬ್ಯಾಟರ್ ವರುಣ್ ಗೌಡ್ (109* ರನ್, 82 ಎಸೆತ, 7 ಬೌಂಡರಿ, 5 ಸಿಕ್ಸರ್) ಸಾಹಸದಿಂದ ಹೈದರಾಬಾದ್ ತಂಡ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಸೋಲಿನ ಕಹಿ ಎದುರಿಸಿದ ಮಯಾಂಕ್ ಅಗರ್ವಾಲ್ ಪಡೆ ಸಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದಿದೆ.
ಎಡಿಎಸ್‌ಎ ರೈಲ್ವೆಸ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಮಯಾಂಕ್ ಹಾಗೂ ಆರ್.ಸ್ಮರಣ್ (83 ರನ್, 75 ಎಸೆತ, 3 ಬೌಂಡರಿ, 5 ಸಿಕ್ಸರ್) ಜತೆಯಾಟದ ನೆರವಿನಿಂದ ಕರ್ನಾಟಕ ತಂಡ 8 ವಿಕೆಟ್‌ಗೆ 320 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ 94 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಹೈದರಾಬಾದ್ ಸಂಕಷ್ಟಕ್ಕೆ ಸಿಲುಕಿತು. ಆಗ ಶತಕವಂಚಿತ ನಾಯಕ ತಿಲಕ್ ವರ್ಮ (99 ರನ್, 106 ರನ್, 7 ಬೌಂಡರಿ, 1 ಸಿಕ್ಸರ್) ಹಾಗೂ ವರುಣ್ ಜತೆಯಾಟದ ಬಲದಿಂದ ಹೈದರಾಬಾದ್ ಅಂತಿಮವಾಗಿ 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 322 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು. 39ನೇ ಓವರ್‌ನಲ್ಲಿ ತಿಲಕ್ ವರ್ಮ ಔಟಾದ ಬಳಿಕ ಹೈದರಾಬಾದ್‌ಗೆ 71 ಎಸೆತಗಳಲ್ಲಿ 115 ರನ್‌ಗಳ ಅವಶ್ಯವಿತ್ತು.
ಕರ್ನಾಟಕ: 8 ವಿಕೆಟ್‌ಗೆ 320(ನಿಕಿನ್ 30, ಮಯಾಂಕ್ 124, ಅನೀಶ್ 11, ಸ್ಮರಣ್ 83, ಅಭಿನವ್ 1, ಶ್ರೀಜಿತ್ 5, ಪ್ರವೀಣ್ 24, ಶ್ರೇಯಸ್ 19*, ಮಿಲಿಂದ್ 66ಕ್ಕೆ 3, ಅನಿಕೇತ್ 40ಕ್ಕೆ 2). ಹೈದರಾಬಾದ್: 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 322 (ತನ್ಮಯ್ 35, ತಿಲಕ್ 99, ಹಿಮತೇಜ 15, ವರುಣ್ 109*, ಅವಿನಾಶ್ 17, ಟಿ.ತ್ಯಾಗರಾಜನ್ 25, ನಿಕಿನ್ ಜೋಸ್ 45ಕ್ಕೆ 2, ಪ್ರವೀಣ್ ದುಬೆ 49ಕ್ಕೆ 2).
ಮಯಾಂಕ್-ಸ್ಮರಣ್ ಆಟ ವ್ಯರ್ಥ
ಮಯಾಂಕ್ ಜತೆಯಾಗಿ ಇನಿಂಗ್ಸ್ ಆರಂಭಿಸಿದ ನಿಕಿನ್ ಜೋಸ್ (37) ರಾಜ್ಯಕ್ಕೆ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 93 ಎಸೆತಗಳಲ್ಲಿ 91 ರನ್ ಪೇರಿಸಿದರು. ಬಳಿಕ ಅನೀಶ್ ಕೆವಿ (11) ರನೌಟ್ ಆಗಿ ನಿರಾಸೆ ಮೂಡಿಸಿದರು. ಮೂರನೇ ವಿಕೆಟ್‌ಗೆ ಮಯಾಂಕ್ ಜತೆಯಾದ ಸ್ಮರಣ್ ಮೊತ್ತ ಹೆಚ್ಚಿಸಲು ನೆರವಾದರು. ಇವರಿಬ್ಬರು 90 ಎಸೆತಗಳಲ್ಲಿ 104 ರನ್ ಬಾರಿಸಿದರು. 36 ಓವರ್‌ಗಳಲ್ಲಿ 2 ವಿಕೆಟ್‌ಗೆ 225 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಕರ್ನಾಟಕ ದಿಢೀರ್ ಕುಸಿತ ಕಂಡಿತು. 95 ಎಸೆತಗಳಲ್ಲಿ ಸತತ 3ನೇ ಶತಕ ಸಿಡಿಸಿ ಮಯಾಂಕ್ ನಿರ್ಗಮಿಸಿದ ಬೆನ್ನಲ್ಲೆ ಸ್ಮರಣ್, ಅಭಿನವ್ ಮನೋಹರ್ (1), ಕೆಎಲ್ ಶ್ರೀಜಿತ್ (5)ಔಟಾದರು. ಕೊನೆಯಲ್ಲಿ ಪ್ರವೀಣ್ ದುಬೆ (24) ಹಾಗೂ ಶ್ರೇಯಸ್ ಗೋಪಾಲ್ (19*) ಉಪಯುಕ್ತ ಆಟದಿಂದ ಕರ್ನಾಟಕ 300ರ ಗಡಿ ದಾಟಿತು.
17. ಹಾಲಿ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಸಿಡಿಸಿದ ಮೂರನೇ ಶತಕ ಇದಾಗಿದ್ದು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಟ್ಟಾರೆ 17ನೇ ಸೆಂಚುರಿ ಎನಿಸಿದೆ.