ಕ್ರೀಡೆ

VIDEO | ಸತತ 4ನೇ ಸೋಲಿಗೆ ಕೆಎಲ್ ರಾಹುಲ್ ಏನಂದರು ಗೊತ್ತೇ?

ದುಬೈ: ಆರಂಭಿಕ ಜತೆಗಾರ ಮಯಾಂಕ್ ಅಗರ್ವಾಲ್ ರನೌಟ್‌ನಿಂದ ಬೇಗನೆ ನಿರ್ಗಮಿಸಿದ್ದು ಕಿಂಗ್ಸ್ ಇಲೆವೆನ್ ತಂಡದ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 202 ರನ್‌ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಲು ಅಡ್ಡಿಯಾಯಿತು ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ. ಜತೆಗೆ ನಿಕೋಲಸ್ ಪೂರನ್ ಹೋರಾಟಕ್ಕೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸಮರ್ಥ ಬೆಂಬಲ ಸಿಗದ ಬಗ್ಗೆಯೂ ಬೇಸರಿಸಿದ್ದಾರೆ.

ಆರಂಭಿಕರ ಭದ್ರ ಬುನಾದಿಯಿಂದ ಸನ್‌ರೈಸರ್ಸ್‌ ತಂಡ 6 ವಿಕೆಟ್‌ಗೆ 201 ರನ್ ಪೇರಿಸಿದರೆ, ಕಿಂಗ್ಸ್ ಇಲೆವೆನ್ 16.5 ಓವರ್‌ಗಳಲ್ಲಿ 132 ರನ್‌ಗೆ ಆಲೌಟ್ ಆಗಿ 69 ರನ್‌ಗಳಿಂದ ಶರಣಾಯಿತು. ಮಯಾಂಕ್ ಕೇವಲ 9 ರನ್ ಗಳಿಸಿ ರನೌಟಾದರೆ, ರಾಹುಲ್ (11), ಸಿಮ್ರಾನ್ ಸಿಂಗ್ (11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ನಡುವೆ ನಿಕೋಲಸ್ ಪೂರನ್ (77 ರನ್, 37 ಎಸೆತ, 5 ಬೌಂಡರಿ, 7 ಸಿಕ್ಸರ್) ಸ್ಫೋಟಕ ಆಟವಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ (7), ಮಂದೀಪ್ ಸಿಂಗ್ (6) ಅವರಿಂದ ಪೂರನ್‌ಗೆ ಸೂಕ್ತ ಬೆಂಬಲ ಸಿಗಲಿಲ್ಲ. ಸನ್‌ರೈಸರ್ಸ್‌ ಪರ ರಶೀದ್ ಖಾನ್ (12ಕ್ಕೆ 3), ಖಲೀಲ್ ಅಹ್ಮದ್ (24ಕ್ಕೆ 2) ಮತ್ತು ಟಿ. ನಟರಾಜನ್ (24ಕ್ಕೆ 2) ಬಿಗಿ ದಾಳಿ ಸಂಘಟಿಸಿದರು. ಇದು ಕಿಂಗ್ಸ್ ಇಲೆವೆನ್‌ಗೆ ಟೂರ್ನಿಯಲ್ಲಿ ಸತತ 4ನೇ ಸೋಲಾಗಿದೆ.

‘ನಾವು ಪವರ್‌ಪ್ಲೇಯಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ಚೇಸಿಂಗ್ ಕಠಿಣವಾಯಿತು. ಮಯಾಂಕ್ ಬೇಗನೆ ರನೌಟ್ ಆಗಿದ್ದರಿಂದ ನಮಗೆ ಉತ್ತಮ ಆರಂಭ ಸಿಗಲಿಲ್ಲ. ಪಂದ್ಯದಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಹೊಡೆತಗಳೆಲ್ಲ ಫೀಲ್ಡರ್‌ಗಳ ಕೈಸೇರುತ್ತಿದ್ದವು’ ಎಂದು ರಾಹುಲ್ ಸೋಲಿನ ಬಳಿಕ ತಿಳಿಸಿದರು.

ಸನ್‌ರೈಸರ್ಸ್‌ ಮೊದಲ ವಿಕೆಟ್ ಕಬಳಿಸುವ ಮುನ್ನ 160 ರನ್ ಬಿಟ್ಟುಕೊಟ್ಟರೂ, ಸ್ಲಾಗ್ ಓವರ್‌ಗಳಲ್ಲಿ ನಿಯಂತ್ರಣ ಸಾಧಿಸಿದ ಬೌಲರ್‌ಗಳನ್ನು ರಾಹುಲ್ ಪ್ರಶಂಸಿಸಿದರು. ಕಳೆದ 5 ಪಂದ್ಯಗಳಲ್ಲಿ ನಾವು ಡೆತ್ ಓವರ್‌ಗಳಲ್ಲಿ ಪರದಾಡಿದ್ದೆವು. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ಸಕಾರಾತ್ಮಕವಾಗಿತ್ತು. ಎದುರಾಳಿಯ ಉತ್ತಮ ಆರಂಭ ಕಂಡಾಗ ಮೊತ್ತ 230ರ ಗಡಿ ದಾಟುವ ಭೀತಿ ಇತ್ತು. ಆದರೆ ಬೌಲರ್‌ಗಳು ಉತ್ತಮ ತಿರುಗೇಟು ನೀಡಿದರು ಎಂದು ರಾಹುಲ್ ಹೇಳಿದರು.

ನಿಕೋಲಸ್ (ಪೂರನ್) ದೊಡ್ಡ ಹೊಡೆತಗಳನ್ನು ಬಾರಿಸುತ್ತಿದ್ದಾಗ ನರ್ವಸ್ ಆಗಿದ್ದೆ. ಬಾಂಗ್ಲಾದಲ್ಲಿ ಅವರ ಜತೆ ಆಡಿದ್ದೆ. ಹೀಗಾಗಿ ಅವರ ಕ್ಲೀನ್‌ಹಿಟ್ ಸಾಮರ್ಥ್ಯದ ಬಗ್ಗೆ ಗೊತ್ತಿತ್ತು. ಆದರೆ ಅಂತಿಮ 4 ಓವರ್‌ಗೆ ಮುನ್ನ ಅವರನ್ನು ಔಟ್ ಮಾಡಿದ್ದರಿಂದ ನಿರಾಳವಾಯಿತು ಎಂದು ಸನ್‌ರೈಸರ್ಸ್‌ ನಾಯಕ ಡೇವಿಡ್ ವಾರ್ನರ್ ಹೇಳಿದರು. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 50 ಪ್ಲಸ್ ಮೊತ್ತವನ್ನು 50 ಬಾರಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು.

12 ರನ್‌ಗೆ 3 ವಿಕೆಟ್ ಕಬಳಿಸಿದ ರಶೀದ್ ಖಾನ್ ಐಪಿಎಲ್‌ನಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್ ನಿರ್ವಹಣೆ ತೋರಿದರು. ಈ ಮುನ್ನ ಹಾಲಿ ಆವೃತ್ತಿಯಲ್ಲೇ ಡೆಲ್ಲಿ ವಿರುದ್ಧ 14 ರನ್‌ಗೆ 3 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿತ್ತು. ನಿಕೋಲಸ್ ಪೂರನ್ 17 ಎಸೆತಗಳಲ್ಲಿ ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಪೂರೈಸಿದರು. ಇದು ಹಾಲಿ ಆವೃತ್ತಿಯಲ್ಲಿ ಅತಿವೇಗದ ಅರ್ಧಶತಕವೂ ಆಗಿದೆ.

ಸನ್‌ರೈಸರ್ಸ್‌ ತಂಡ ರನ್ ಅಂತರದಲ್ಲಿ ತನ್ನ 3ನೇ ಅತಿದೊಡ್ಡ ಗೆಲುವ ದಾಖಲಿಸಿತು. 2019ರಲ್ಲಿ ಆರ್‌ಸಿಬಿ ವಿರುದ್ಧ 118 ಮತ್ತು 2016ರಲ್ಲಿ ಮುಂಬೈ ವಿರುದ್ಧ 85 ರನ್‌ಗಳಿಂದ ಗೆದ್ದಿದ್ದು ಮೊದಲೆರಡು ಸ್ಥಾನದಲ್ಲಿದೆ.