ನವದೆಹಲಿ: ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಮುಂಬರುವ ಐಪಿಎಲ್ 15ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಟೆಸ್ಟ್ ತಂಡದ ಸದಸ್ಯರಾಗಿರುವ 31 ವರ್ಷದ ಮಯಾಂಕ್ ಅಗರ್ವಾಲ್ 2018ರಿಂದ ಪಂಜಾಬ್ ತಂಡದ ಭಾಗವಾಗಿದ್ದಾರೆ. ಇದರಿಂದ ಈ ಬಾರಿಯ ಐಪಿಎಲ್‌ನಲ್ಲಿ ಇಬ್ಬರು ಕರ್ನಾಟಕದ ಆಟಗಾರರು ನಾಯಕತ್ವ ವಹಿಸಲಿದ್ದಾರೆ. ಈಗಾಗಲೆ ಕೆಎಲ್ ರಾಹುಲ್ ಅವರನ್ನು ಹೊಸ ಫ್ರಾಂಚೈಸಿ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕನಾಗಿ ನೇಮಿಸಲಾಗಿದೆ. ಆಟಗಾರರ ಮೆಗಾ ಹರಾಜಿಗೂ ಮುನ್ನ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ತಂಡ 12 ಕೋಟಿ ರೂ. ಮೊತ್ತಕ್ಕೆ ರಿಟೇನ್ ಮಾಡಿಕೊಂಡಿತ್ತು.
‘2018ರಿಂದಲೂ ಪಂಜಾಬ್ ತಂಡದ ಭಾಗವಾಗಿದ್ದೇನೆ. ಇಂಥ ತಂಡ ಮುನ್ನಡೆಸಲು ಉತ್ಸುಕನಾಗಿದ್ದೇನೆ. ಅಷ್ಟೇ ಸಂತೋಷ ಕೂಡ ಆಗುತ್ತಿದೆ. ಇದೊಂದು ದೊಡ್ಡ ಜವಾಬ್ದಾರಿಯಾಗಿದ್ದು, ನನ್ನ ನಿರ್ವಹಣೆಯ ಜತೆಗೆ ಸೂಕ್ತವಾಗಿ ನಾಯಕತ್ವವನ್ನು ನಿಭಾಯಿಸುವೆ. ಪಂಜಾಬ್ ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದು, ನಾಯಕತ್ವ ನನಗೆ ಕಷ್ಟವಾಗುವುದಿಲ್ಲ’ ಎಂದು ಮಯಾಂಕ್ ಪಂಜಾಬ್ ಕಿಂಗ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ಮಯಾಂಕ್ ಅಗರ್ವಾಲ್ ತಂಡದ ಉಪನಾಯಕನಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಹಿಂದಿನ ನಾಯಕ ರಾಹುಲ್ ಅನುಪಸ್ಥಿತಿಯಲ್ಲಿ ಕಳೆದ ಆವೃತ್ತಿಯಲ್ಲಿ 1 ಪಂದ್ಯದಲ್ಲಿ ಮುನ್ನಡೆಸಿದ್ದರು. 2011ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್, ಡೆಲ್ಲಿ, ಆರ್‌ಸಿಬಿ, ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರವೂ ಆಡಿದ್ದರು. ಕಳೆದ 2 ಆವೃತ್ತಿಗಳಲ್ಲಿ ಸರಾಸರಿ 400 ರನ್ ಪೇರಿಸಿದ್ದಾರೆ. ರಾಷ್ಟ್ರೀಯ ತಂಡದ ಪರ 19 ಟೆಸ್ಟ್ ಪಂದ್ಯಗಳಿಂದ 4 ಶತಕ ಹಾಗೂ 5 ಅರ್ಧಶತಕ ಒಳಗೊಂಡಂತೆ 1,429 ರನ್ ಬಾರಿಸಿದ್ದಾರೆ.
‘ಕೆಲ ಅನುಭವಿ ಆಟಗಾರರು ತಂಡದಲ್ಲಿದ್ದು, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯುವ ಆಟಗಾರರಿಗೆ ಉತ್ತಮ ಅವಕಾಶ ಇದಾಗಿದೆ. ಟ್ರೋಫಿ ಜಯಿಸುವುದೇ ತಂಡದ ಗುರಿಯಾಗಿದೆ. ನನ್ನ ಮೇಲೆ ಭರವಸೆ ಇಟ್ಟು, ಈ ಅವಕಾಶ ನೀಡಿದ ತಂಡದ ಆಡಳಿತ ಮಂಡಳಿಗೆ ಧನ್ಯವಾದಗಳು’ ಎಂದು ಮಯಾಂಕ್ ತಿಳಿಸಿದ್ದಾರೆ. ‘ಮಯಾಂಕ್ 2018ರಿಂದಲೂ ತಂಡದ ಪ್ರಮುಖ ಭಾಗವಾಗಿದ್ದು, ಕಳೆದ 2 ವರ್ಷಗಳಿಂದ ನಾಯಕತ್ವ ಗುಂಪಿನಲ್ಲಿದ್ದಾರೆ. ಅನುಭವಿ ಹಾಗೂ ಪ್ರತಿಭಾನ್ವಿತ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಭವಿಷ್ಯದ ದೃಷ್ಟಿಯಿಂದ ಮಯಾಂಕ್ ಸಾರಥ್ಯದಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕುತ್ತೇವೆ. ಮಯಾಂಕ್ ಜತೆ ಕಾರ್ಯನಿರ್ವಹಿಸಲು ನಾನು ಕೂಡ ಉತ್ಸುಕನಾಗಿದ್ದೇನೆ’ ಎಂದು ತಂಡದ ಮುಖ್ಯ ಕೋಚ್ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ 2014ರಲ್ಲಿ ಮೊದಲ ಹಾಗೂ ಕಡೇ ಬಾರಿಗೆ ಫೈನಲ್ ಪ್ರವೇಶಿಸಿತ್ತು.