ಕ್ರೀಡೆ

ಡಿಸೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್

ದುಬೈ: ಭಾರತ ಟೆಸ್ಟ್ ತಂಡದ ಆರಂಭಿಕ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಡಿಸೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತೋರಿದ ಉತ್ತಮ ಬ್ಯಾಟಿಂಗ್ ನಿರ್ವಹಣೆಗಾಗಿ ಅವರು ಈ ಗೌರವ ಪಡೆದಿದ್ದಾರೆ. ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಮತ್ತು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಪ್ರಶಸ್ತಿ ಪೈಪೋಟಿಯಲ್ಲಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಆಡಿದ 2 ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ 2 ಅರ್ಧಶತಕ ಮತ್ತು 1 ಶತಕ ಸಹಿತ 69.00ರ ಸರಾಸರಿಯಲ್ಲಿ 276 ರನ್ ಗಳಿಸಿದ್ದರು. ಈ ಪೈಕಿ ನ್ಯೂಜಿಲೆಂಡ್ ವಿರುದ್ಧ ಮುಂಬೈ ಟೆಸ್ಟ್‌ನಲ್ಲಿ 150 ಮತ್ತು 62 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಜತೆಗೆ ಮೊದಲ ವಿಕೆಟ್‌ಗೆ ಅಮೂಲ್ಯ 117 ರನ್ ಜತೆಯಾಟವಾಡಿದ್ದರು ಮತ್ತು 60 ರನ್ ಬಾರಿಸಿದ್ದರು.

ಅಜಾಜ್ ಪಟೇಲ್ ಮುಂಬೈ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಬರೆದಿದ್ದರೆ, ಸ್ಟಾರ್ಕ್ ಆಶಸ್ ಸರಣಿಯ ಮೊದಲ 3 ಟೆಸ್ಟ್‌ಗಳಲ್ಲಿ 19.64ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಜತೆಗೆ ಬ್ಯಾಟಿಂಗ್‌ನಲ್ಲೂ 117 ರನ್ ಕೊಡುಗೆ ನೀಡಿದ್ದರು.

ಪ್ರಶಸ್ತಿ ರೇಸ್‌ನಲ್ಲಿರುವವರಿಗೆ ಕ್ರಿಕೆಟ್ ಪ್ರೇಮಿಗಳೂ ಐಸಿಸಿ ವೆಬ್‌ಸೈಟ್ ಮೂಲಕ ಮತ ಚಲಾಯಿಸಬಹುದಾಗಿದೆ. ಪ್ರತಿ ತಿಂಗಳ 2ನೇ ಸೋಮವಾರ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗುತ್ತದೆ.