ಕ್ರೀಡೆ

VIDEO | ಬೌಂಡರಿ ಲೈನ್ ಬಳಿ ಅದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್‌ವೆಲ್-ನೀಶಾಮ್

ಅಬುಧಾಬಿ: ಐಪಿಎಲ್ ಟೂರ್ನಿ ಈಗಾಗಲೆ ಕೆಲ ಅದ್ಭುತ ಫೀಲ್ಡಿಂಗ್ ನಿರ್ವಹಣೆಗಳಿಗೆ ಸಾಕ್ಷಿಯಾಗಿದೆ. ಗುರುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಾದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನ್ಯೂಜಿಲೆಂಡ್‌ನ ಜೇಮ್ಸ್ ನೀಶಾಮ್ ಇದೇ ರೀತಿಯಲ್ಲಿ ಬೌಂಡರಿ ಬಳಿ ಪಾಲುದಾರಿಕೆಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನಸೆಳೆದಿದ್ದಾರೆ.

ಪಂದ್ಯದ 17ನೇ ಓವರ್‌ನಲ್ಲಿ ವೇಗಿ ಮೊಹಮದ್ ಶಮಿ ಎಸೆದ ಮೊದಲ ಎಸೆತದಲ್ಲಿ ರೋಹಿತ್ ಶರ್ಮ ಭರ್ಜರಿ ಸಿಕ್ಸರ್ ಸಿಡಿಸಲು ಯತ್ನಿಸಿದರು. ಈ ವೇಳೆ ಲಾಂಗ್-ಆಫ್​ ಬೌಂಡರಿ ಲೈನ್ ಬಳಿ ಇದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಚೆಂಡನ್ನು ಕ್ಯಾಚ್ ಹಿಡಿದರೂ, ಓಡಿ ಬಂದ ಅವರಿಗೆ ಬ್ಯಾಲೆನ್ಸ್ ಸಿಗಲಿಲ್ಲ. ಹೀಗಾಗಿ ಬೌಂಡರಿ ಗೆರೆ ದಾಟುವ ಹಂತದಲ್ಲಿದ್ದ ಅವರು ಚೆಂಡನ್ನು ಗಾಳಿಯಲ್ಲಿ ಎಸೆದರು. ಆಗ ಅಲ್ಲೇ ಓಡುತ್ತ ಬಂದ ಸಹ-ಫೀಲ್ಡರ್ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸಿದರು. ಈ ಮೂಲಕ ರಿಲೇ ರೀತಿಯಲ್ಲಿ ಕ್ಯಾಚ್ ಹಿಡಿದರು.

ಮ್ಯಾಕ್ಸ್‌ವೆಲ್-ನೀಶಾಮ್‌ರ ಅದ್ಬುತ ಕ್ಯಾಚ್‌ನಿಂದಾಗಿ ರೋಹಿತ್ ಶರ್ಮ ಅವರ ಇನಿಂಗ್ಸ್ 70 ರನ್‌ಗಳಿಗೆ ಕೊನೆಗೊಂಡಿತು. ಇವರಿಬ್ಬರ ಸಾಹಸದಿಂದ ರೋಹಿತ್ ಇನಿಂಗ್ಸ್‌ಗೆ ತೆರೆ ಬೀಳದಿದ್ದರೆ ರೋಹಿತ್ ಶರ್ಮಗೆ ಶತಕ ಸಿಡಿಸುವ ಅವಕಾಶ ಸಿಗುತ್ತಿತ್ತು.