ಕ್ರೀಡೆ

ಜಯದ ಓಟ ಮುಂದುವರಿಸುವ ಹಂಬಲ: ಇಂದು ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ, ಕಾಡುತ್ತಿದೆ ಗಾಯದ ಸಮಸ್ಯೆ

ಹ್ಯಾಮಿಲ್ಟನ್: ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದ ವಿಶ್ವಾಸದಲ್ಲಿರುವ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಸವಾಲಿಗೆ ಸಜ್ಜಾಗಿದೆ. ಹ್ಯಾಮಿಲ್ಟನ್​ನಲ್ಲಿ ಬುಧವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲೂ ಭಾರತ ತಂಡ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಆದರೆ ಉಭಯ ತಂಡಗಳಿಗೂ ಗಾಯದ ಸಮಸ್ಯೆ ಕಾಡುತ್ತಿದೆ.

ಅಂತಿಮ ಟಿ20 ಪಂದ್ಯದ ವೇಳೆ ಮೀನಖಂಡ ನೋವಿಗೆ ತುತ್ತಾಗಿರುವ ರೋಹಿತ್ ಶರ್ಮ ಅಲಭ್ಯತೆ ಭಾರತ ತಂಡವನ್ನು ಕಾಡಲಿದ್ದರೆ, ಕಿವೀಸ್​ಗೆ ಮತ್ತೆ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯ ರಾಗಿದ್ದಾರೆ. ಟಿ20 ವಿಶ್ವಕಪ್ ಸಿದ್ಧತೆಗೆ ಏಕದಿನ ಸರಣಿ ವೇದಿಕೆಯಲ್ಲ ಎಂದು ನಾಯಕ ಕೊಹ್ಲಿ ಹೇಳಿರುವುದರಿಂದ, ಇಲ್ಲಿ ಅವರು ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಗಳಿಲ್ಲ. ಇತ್ತೀಚೆಗೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆದ್ದ ವಿಶ್ವಾಸವೂ ಭಾರತ ತಂಡಕ್ಕಿದೆ.

ನ್ಯೂಜಿಲೆಂಡ್ ತಂಡ ವಿಶ್ವಕಪ್ ಫೈನಲ್ ಪಂದ್ಯ ನಿರಾಸೆಯ ಬಳಿಕ ಮೊದಲ ಬಾರಿಗೆ ಏಕದಿನ ಸರಣಿ ಆಡಲಿದ್ದು, ಟಿ20 ಸರಣಿಗಿಂತ ಸಾಕಷ್ಟು ಬದಲಾದ ತಂಡವನ್ನು ಕಣಕ್ಕಿಳಿಸುತ್ತಿದೆ. ಆಲ್ರೌಂಡರ್ ಜಿಮ್ಮಿ ನೀಶಾಮ್ ಸೇರ್ಪಡೆ ತಂಡಕ್ಕೆ ಬಲ ತುಂಬುವ ನಿರೀಕ್ಷೆ ಇದೆ. ಕೇನ್ ಜತೆಗೆ ಪ್ರಮುಖ ವೇಗಿಗಳಾದ ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಗೈರು ತಂಡವನ್ನು ಕಾಡಲಿದೆ.ಉಭಯ ತಂಡಗಳ ಕೊನೇ ಏಕದಿನ ಮುಖಾಮುಖಿ ನಡೆದಿದ್ದು, ಕಳೆದ ವರ್ಷದ ವಿಶ್ವಕಪ್ ಸೆಮಿಫೈನಲ್​ನಲ್ಲಿ. ಅಲ್ಲಿ ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆಗೆ ಉತ್ತಮ ಅವಕಾಶ ಎದುರಾಗಿದೆ. -ಪಿಟಿಐ/ಏಜೆನ್ಸೀಸ್

ಮಯಾಂಕ್-ಪೃಥ್ವಿ ಹೊಸ ಆರಂಭಿಕರು

ಪೃಥ್ವಿ ಷಾ ಮತ್ತು ಮಯಾಂಕ್ ಅಗರ್ವಾಲ್ ಹೊಸ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುವ ಮೂಲಕ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಜತೆಗೆ ಮಧ್ಯಮ ಸರದಿಯಲ್ಲಿ ಅಂದರೆ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಅನುಭವಿ ಆರಂಭಿಕ ಜೋಡಿ ಶಿಖರ್ ಧವನ್-ರೋಹಿತ್ ಶರ್ಮ ಗೈರಿನಲ್ಲಿ ಮುಂಬೈ-ಕರ್ನಾಟಕದ ಯುವ ಬ್ಯಾಟ್ಸ್​ಮನ್​ಗಳು ದೊಡ್ಡ ಹೊಣೆ ನಿಭಾಯಿಸಬೇಕಾಗಿದೆ.

ಮಯಾಂಕ್-ಪೃಥ್ವಿ ಷಾ ಭಾರತ ಪರ ಜತೆಯಾಗಿ ಏಕದಿನ ಪದಾರ್ಪಣೆ ಮಾಡುತ್ತಿರುವ 4ನೇ ಆರಂಭಿಕ ಜೋಡಿಯಾಗಿದ್ದಾರೆ. ಸುನೀಲ್ ಗಾವಸ್ಕರ್-ಸುಧೀರ್ ನಾಯ್್ಕ (1974ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಮೊದಲ ಏಕದಿನದಲ್ಲಿ), ಪಾರ್ಥಸಾರಥಿ ಶರ್ಮ-ದಿಲೀಪ್ ವೆಂಗ್ಸರ್ಕಾರ್ (1976ರಲ್ಲಿ ನ್ಯೂಜಿಲೆಂಡ್ ವಿರುದ್ಧ), ಕೆಎಲ್ ರಾಹುಲ್-ಕರುಣ್ ನಾಯರ್ (2016ರಲ್ಲಿ ಜಿಂಬಾಬ್ವೆ ವಿರುದ್ಧ) ಹಿಂದಿನ ಆರಂಭಿಕ ಜೋಡಿಯಾಗಿದ್ದಾರೆ.

ಟೀಮ್ ನ್ಯೂಸ್

ಭಾರತ: ರಿಸ್ಟ್ ಸ್ಪಿನ್ನರ್​ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ನಡುವೆ ಒಬ್ಬರಷ್ಟೇ ಕಣಕ್ಕಿಳಿಯಬಹುದು. ಕೊನೇ 2 ಟಿ20 ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ಮೊಹಮದ್ ಶಮಿ ಆಡುವ ನಿರೀಕ್ಷೆ ಇದೆ. ಟಿ20 ಸರಣಿಯಲ್ಲಿ ಉಪಯುಕ್ತ ಆಟವಾಡಿದ ಮನೀಷ್ ಪಾಂಡೆ ಏಕದಿನದಲ್ಲೂ ಅವಕಾಶ ಪಡೆಯಬಹುದು. ಇದರಿಂದ ಕೇದಾರ್ ಜಾಧವ್ ಹೊರಗುಳಿಯಲಿದ್ದಾರೆ. ಟಿ20 ಸರಣಿಯಲ್ಲಿ ನಿರಾಸೆ ಮೂಡಿಸಿದ್ದ ಆಲ್ರೌಂಡರ್ ಶಿವಂ ದುಬೆ ಆಡುವುದು ಅನುಮಾನ. ಹೀಗಾಗಿ ರವೀಂದ್ರ ಜಡೇಜಾ ಮರಳಲಿದ್ದಾರೆ. ್ಞಂಭಾವ್ಯ ತಂಡ: ಮಯಾಂಕ್, ಪೃಥ್ವಿ ಷಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಮನೀಷ್ ಪಾಂಡೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಚಾಹಲ್/ಕುಲದೀಪ್, ಶಮಿ/ಸೈನಿ, ಜಸ್​ಪ್ರೀತ್ ಬುಮ್ರಾ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ ಗೈರಿನಲ್ಲಿ ಮಾರ್ಕ್ ಚಾಪ್​ವುನ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಟಿ20 ಸರಣಿಯಲ್ಲಿ ಪರಿಣಾಮಕಾರಿ ಎನಿಸದ ವೇಗಿ ಟಿಮ್ ಸೌಥಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಲಂಬೂ ವೇಗಿ ಕೈಲ್ ಜಾಮಿಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಸ್ಪಿನ್ನರ್​ಗಳಾದ ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಲ್ಲಿ ಒಬ್ಬರಷ್ಟೇ ಕಣಕ್ಕಿಳಿಯಬಹುದು. ಸಂಭಾವ್ಯ ತಂಡ: ಗುಪ್ಟಿಲ್, ನಿಕೋಲ್ಸ್, ಚಾಪ್​ವುನ್, ರಾಸ್ ಟೇಲರ್, ಲಾಥಮ್ (ವಿ.ಕೀ, ನಾಯಕ), ಗ್ರಾಂಡ್​ಹೋಮ್ ಜಿಮ್ಮಿ ನೀಶಾಮ್ ಸ್ಯಾಂಟ್ನರ್/ಸೋಧಿ, ಜಾಮಿಸನ್/ಸೌಥಿ, ಬೆನ್ನೆಟ್, ಕಗಿಲಿನ್.

ಎರಡು ಏಕದಿನಕ್ಕೆ ಕೇನ್ ಗೈರು, ಲಾಥಮ್ ನಾಯಕ

ಟಿ20 ಸರಣಿಯ ಹೀನಾಯ ನಿರ್ವಹಣೆಯ ಬಳಿಕ ಏಕದಿನ ಸರಣಿಯಲ್ಲಾದರೂ ತಿರುಗೇಟು ನೀಡುವ ಹಂಬಲದಲ್ಲಿರುವ ಕಿವೀಸ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದಾಗಿ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಗೈರಿನಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಟಾಮ್ ಲಾಥಮ್ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಡ ಭುಜದ ನೋವಿನಿಂದ ವಿಲಿಯಮ್ಸನ್ ಕಡೇ 2 ಟಿ20 ಪಂದ್ಯಗಳಿಂದಲೂ ಹೊರಗುಳಿದಿದ್ದರು. ಲಾಥಮ್ ಈ ಹಿಂದೆ 8 ಏಕದಿನಗಳಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದ್ದು, 6 ಗೆಲುವಿನ ಉತ್ತಮ ದಾಖಲೆ ಹೊಂದಿದ್ದಾರೆ. 1 ಸೋಲು, 1 ರದ್ದು ಕಂಡಿದ್ದಾರೆ.