ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಬಹುದಿನಗಳಿಂದ ಕಿತ್ತಾಡಿಕೊಳ್ಳುತ್ತಿದ್ದ ಸಂಗತಿ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿದೆ. ಇಬ್ಬರು ಎದುರು-ಬದುರಾದರೆ ಸಾಕು ಅಲ್ಲಿ ಮಾತಿನ ಚಕಮಕಿ ತಪ್ಪುತ್ತಿರಲಿಲ್ಲ. ಇಬ್ಬರ ಜಗಳಕ್ಕೆ ಬಹುತೇಕ ಮಂದಿ ಸಾಕ್ಷಿಯಾಗಿದ್ದಾರೆ. ಆದರೆ, ಕಳೆದ ಮಾರ್ಚ್ 29ರಂದು ಬೆಂಗಳೂರಿನಲ್ಲಿ ನಡೆದ ಕೆಕೆಆರ್ vs ಆರ್ಸಿಬಿ ನಡುವಿನ ಪಂದ್ಯದ ವೇಳೆ ಆಗಿದ್ದೆಲ್ಲವೂ ಉಲ್ಟಾಪಲ್ಟಾ!
ಈ ಪಂದ್ಯದಲ್ಲಿ ಆರ್ಸಿಬಿ ಇನಿಂಗ್ಸ್ನ 16ನೇ ಓವರ್ ಬಳಿಕ ನೀಡಿದ ಟೈಮ್ಔಟ್ ವೇಳೆ ಅಂಗಣಕ್ಕೆ ಆಗಮಿಸಿದ ಗಂಭೀರ್, ನಸುನಗುತ್ತಲೆ ಕೊಹ್ಲಿಯನ್ನು ಅಪ್ಪಿಕೊಂಡರು. ಈ ಮೂಲಕ ಇಬ್ಬರೂ ಹಿಂದಿನ ವೈಮನಸ್ಯ ಮರೆತಿರುವುದನ್ನು ಸ್ಪಷ್ಟಪಡಿಸಿದರು. ದೆಹಲಿಯವರಾದ ಇಬ್ಬರ ಮುಖದಲ್ಲೂ ನಗು ಬಹುಕಾಲದ ನಂತರ ಭೇಟಿಯಾದ ಸ್ನೇಹಮಿಲನದಂತಿತ್ತು. ಇಬ್ಬರು ಅಪ್ಪಿಕೊಂಡ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ, ಎಕ್ಸ್ನಲ್ಲಿ ಟ್ರೆಂಡ್ ಕೂಡ ಆಗಿತ್ತು.
ಇದೀಗ ಕೊಹ್ಲಿ ಈ ವಿಚಾರವಾಗಿ ಮೌನ ಮುರಿದಿದ್ದಾರೆ. ಪೂಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಅಭಿಮಾನಿಗಳೊಂದಿಗೆ ಸಂವಾದ ನಡೆಸುವಾಗ ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನನ್ನ ಮತ್ತು ಗಂಭೀರ್ ನಡುವೆ ಇನ್ಮುಂದೆ ಯಾವುದೇ ಜಗಳ ಇಲ್ಲದಿರುವುದಿಂದ ಜನರು ತುಂಬಾ ನಿರಾಸೆಗೊಂಡಿದ್ದಾರೆ ಎಂದು ಜೋಕ್ಸ್ ಮಾಡಿದ್ದಾರೆ.
ನನ್ನ ವರ್ತನೆಯಿಂದ ಜನರು ತುಂಬಾ ನಿರಾಸೆಗೊಂಡಿದ್ದಾರೆ. ನಾನು ಮೊದಲು ನವೀನ್ ಉಲ್ ಹಕ್ರನ್ನು ಅಪ್ಪಿಕೊಂಡೆ. ಇದಾದ ಬಳಿಕ ಗಂಭೀರ್ ಭಾಯ್ ನನ್ನನ್ನು ಅಪ್ಪಿಕೊಂಡರು. ಅಂದರೆ ನಿಮಗೆಲ್ಲ ಮಸಾಲಾ ಮುಗಿದಿದೆ ಎಂದರ್ಥ. ನಾವಿನ್ನೂ ಮಕ್ಕಳಲ್ಲ ಎಂದು ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದರು.
2013ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಕೊಹ್ಲಿ ಮತ್ತು ಗಂಭೀರ್ ಮೈದಾನದಲ್ಲಿ ಕಿತ್ತಾಡಿಕೊಂಡರು. ಅಂದಿನಿಂದ ಇಬ್ಬರ ನಡುವೆ ಪ್ರತಿ ಸೀಸನ್ನಲ್ಲೂ ಕಿತ್ತಾಟ ಮುಂದುವರಿದಿತ್ತು. ಕಳೆದ ಸೀಸನ್ನಲ್ಲಂತೂ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿತ್ತು. ಆದರೆ, ತಮ್ಮ ನಡುವಿನ ಎಲ್ಲ ಮನಸ್ತಾಪಗಳು ಈ ಸೀಸನ್ನಲ್ಲಿ ಕೊನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಇದೇ ಸಂದರ್ಭವನ್ನು ಮುಂದಿಟ್ಟುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್)