ಕ್ರೀಡೆ

ಮಿಚೆಲ್ ಮಾರ್ಷ್ ಆಲ್ರೌಂಡ್ ಆಟಕ್ಕೆ ಮಣಿದ ರಾಜಸ್ಥಾನ; ಡೆಲ್ಲಿ ಪ್ಲೇಆಫ್​ ಆಸೆ ಜೀವಂತ

ಮುಂಬೈ: ಮಿಚೆಲ್ ಮಾರ್ಷ್ (89 ರನ್, 62 ಎಸೆತ, 5 ಬೌಂಡರಿ, 7 ಸಿಕ್ಸರ್, 25ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ನೆರವಿನಿಂದ ಐಪಿಎಲ್-15ರಲ್ಲಿ ಆರನೇ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್​ ಕನಸು ಜೀವಂತ ಉಳಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡದ ಬಲಿಷ್ಠ ಬೌಲಿಂಗ್ ವಿಭಾಗದ ಎದುರು ಭರ್ಜರಿ ಚೇಸಿಂಗ್ ನಡೆಸಿದ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಕಾಯ್ದುಕೊಂಡರೆ, ಸೋಲಿನ ನಡುವೆಯೂ ಪ್ಲೇಆಫ್​ ಸನಿಹದಲ್ಲೇ ಉಳಿದಿರುವ ಸಂಜು ಸ್ಯಾಮ್ಸನ್ ಬಳಗ 3ನೇ ಸ್ಥಾನದಲ್ಲಿ ಮುಂದುವರಿಯಿತು.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತು. ಬಳಿಕ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಡೆಲ್ಲಿ ತಂಡ, ರಾಜಸ್ಥಾನವನ್ನು 6 ವಿಕೆಟ್‌ಗೆ 160 ರನ್‌ಗಳಿಗೆ ನಿಯಂತ್ರಿಸಿತು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (50 ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಚೊಚ್ಚಲ ಅರ್ಧಶತಕ ಮತ್ತು ಕನ್ನಡಿಗ ದೇವದತ್ ಪಡಿಕಲ್ (48 ರನ್, 30 ಎಸೆತ, 6 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನಿರ್ವಹಣೆ ರಾಯಲ್ಸ್‌ಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಯಿತು. ಪ್ರತಿಯಾಗಿ ಡೆಲ್ಲಿ ತಂಡ ಆಸೀಸ್ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ (52*ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿಯ ಅಮೋಘ ಜತೆಯಾಟದ ಬಲದಿಂದ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 161 ರನ್ ಪೇರಿಸಿ ಗೆಲುವು ದಾಖಲಿಸಿತು. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಹೀನಾಯ ಸೋಲು ಕಂಡಿದ್ದ ಡೆಲ್ಲಿ ಮತ್ತೆ ಜಯದ ಹಾದಿಗೆ ಮರಳಿದೆ.

ಮಾರ್ಷ್-ವಾರ್ನರ್ ದಿಟ್ಟ ಚೇಸಿಂಗ್

ಇನಿಂಗ್ಸ್‌ನ 2ನೇ ಎಸೆತದಲ್ಲೇ ಕೆಎಸ್ ಶ್ರೀಕರ್ (0) ವಿಕೆಟ್ ಕಬಳಿಸುವ ಮೂಲಕ ಟ್ರೆಂಟ್ ಬೌಲ್ಟ್ ಡೆಲ್ಲಿಗೆ ಆರಂಭಿಕ ಆಘಾತ ನೀಡಿದ್ದರು. ಆಗ ಎಡಗೈ ಆರಂಭಿಕ ವಾರ್ನರ್ ಅವರನ್ನು ಕೂಡಿಕೊಂಡ ಮಿಚೆಲ್ ಮಾರ್ಷ್ 2ನೇ ವಿಕೆಟ್‌ಗೆ 101 ಎಸೆತಗಳಲ್ಲಿ 144 ರನ್ ಸೇರಿಸಿ ಸುಲಭ ಗೆಲುವು ತಂದರು.

ಅಶ್ವಿನ್-ಪಡಿಕಲ್ ಆಸರೆ

ಭರ್ಜರಿ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ (7) ಮತ್ತು ಕಳೆದ ಪಂದ್ಯದ ಹೀರೋ ಯಶಸ್ವಿ ಜೈಸ್ವಾಲ್ (19) ವಿಕೆಟ್‌ಗಳನ್ನು ರಾಜಸ್ಥಾನ ಬೇಗನೆ ಕಳೆದುಕೊಂಡಿತು. ಆಗ ತಂಡಕ್ಕೆ ಆಸರೆಯಾದ ಅಶ್ವಿನ್-ಪಡಿಕಲ್ ಜೋಡಿ 3ನೇ ವಿಕೆಟ್‌ಗೆ 36 ಎಸೆತಗಳಲ್ಲಿ 53 ರನ್ ಕೂಡಿಹಾಕಿತು. ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿದ ತಂಡದ ಕ್ರಮವನ್ನು ಸಮರ್ಥಿಸುವಂತೆ ಆಡಿದ ಅಶ್ವಿನ್, ಅರ್ಧಶತಕ ಪೂರೈಸಿದ ಬೆನ್ನಲ್ಲೇ ಔಟಾದರು. ಬಳಿಕ ನಾಯಕ ಸಂಜು ಸ್ಯಾಮ್ಸನ್ (6) ಮತ್ತು ರಿಯಾನ್ ಪರಾಗ್ (9) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಸ್ಲಾಗ್ ಓವರ್‌ಗಳಲ್ಲಿ ರಾಯಲ್ಸ್ ರನ್‌ಗತಿ ಏರಲಿಲ್ಲ. ಅರ್ಧಶತಕದಂಚಿನಲ್ಲಿ ಪಡಿಕಲ್ ಕೂಡ ಔಟಾದರು. ಡೆಲ್ಲಿ ಪರ ವೇಗಿಗಳಾದ ಚೇತನ್ ಸಕಾರಿಯ, ಅನ್ರಿಚ್ ನೋಕಿಯ ಮತ್ತು ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಕಬಳಿಸಿದರು. ಆರ್. ಅಶ್ವಿನ್ ಐಪಿಎಲ್‌ನಲ್ಲಿ ಆಡಿದ 179ನೇ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. 46 ರನ್ ಅವರ ಹಿಂದಿನ ಗರಿಷ್ಠ ಗಳಿಕೆ.

ಅಶ್ವಿನ್ ಭಿನ್ನ ಬ್ಯಾಟಿಂಗ್ ಭಂಗಿ!

ಅಶ್ವಿನ್ ಅವರ ಅರ್ಧಶತಕದಾಟದ ವೇಳೆ ಅವರ ವಿಭಿನ್ನವಾದ ಬ್ಯಾಟಿಂಗ್ ಭಂಗಿಯೂ ಸಾಕಷ್ಟು ಗಮನಸೆಳೆಯಿತು. ಗಲ್ಲಿ ಕ್ರಿಕೆಟ್‌ನಲ್ಲಿ ಅಂಡರ್‌ಆರ್ಮ್ ಬೌಲಿಂಗ್‌ಗೆ ಬ್ಯಾಟರ್‌ಗಳು ಬಗ್ಗಿ ನಿಲ್ಲುವಂತೆ ಅಶ್ವಿನ್, ಸ್ಪಿನ್ನರ್ ಕುಲದೀಪ್ ಯಾದವ್‌ರನ್ನು ಎದುರಿಸಿದರು. ಹಾಕಿ ಆಟದಲ್ಲಿ ಪೆನಾಲ್ಟಿ ಕಾರ್ನರ್ ತೆಗೆದುಕೊಳ್ಳುವವರಂತೆಯೂ ಈ ಭಂಗಿ ಕಾಣಿಸುತ್ತಿತ್ತು. ಐಪಿಎಲ್‌ನಲ್ಲಿ ಈಗಾಗಲೆ ‘ಮಂಕಡಿಂಗ್’ ಮತ್ತು ‘ರಿಟೈರ್ಡ್ ಔಟ್’ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಅಶ್ವಿನ್, ಹೊಸ ‘ಬ್ಯಾಟಿಂಗ್ ಸ್ಟ್ಯಾನ್ಸ್’ನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದ್ದಾರೆ.

ಲಲಿತ್, ಚೇತನ್ ಇನ್

ಡೆಲ್ಲಿ ತಂಡ 2 ಬದಲಾವಣೆ ಕಂಡಿತು. ಲಲಿತ್ ಯಾದವ್ ಮತ್ತು ಚೇತನ್ ಸಕಾರಿಯಗೆ ರಿಪಲ್ ಪಟೇಲ್ ಮತ್ತು ಖಲೀಲ್ ಅಹ್ಮದ್ ಬದಲಿಗೆ ಸ್ಥಾನ ಲಭಿಸಿತು. ರಾಜಸ್ಥಾನ ಪರ ಹೆಟ್ಮೆಯರ್ ಬದಲಿಗೆ ರಸೀ ವಾನ್ ಡರ್ ಡುಸೆನ್ ಸ್ಥಾನ ಪಡೆದರು.