ಬೆಂಗಳೂರು: ಆರ್ಸಿಬಿ ಮಹಿಳಾ ತಂಡದಂತೆ ಪುರುಷರ ತಂಡವೂ ಪ್ರಶಸ್ತಿ ಗೆಲ್ಲುತ್ತದೆ ಎಂಬ ನಿರೀಕ್ಷೆ ನಿಜವಾಗಲಿಲ್ಲ. ಆದರೂ ಡಬ್ಲ್ಯುಪಿಎಲ್-ಐಪಿಎಲ್ ನಡುವೆ ಸಾಮ್ಯತೆ ಕಾಣಿಸಿದೆ! ಉಭಯ ಟೂರ್ನಿಗಳ ಫೈನಲ್ ಪಂದ್ಯದ ನಡುವೆ ಹಲವು ಸಾಮ್ಯತೆಗಳಿವೆ.
ಡಬ್ಲ್ಯುಪಿಎಲ್ ಫೈನಲ್ನಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 18.3 ಓವರ್ಗಳಲ್ಲೇ 113 ರನ್ಗಳಿಗೇ ಆಲೌಟ್ ಆಗಿತ್ತು. ಚೇಸಿಂಗ್ ಮಾಡಿದ ಆರ್ಸಿಬಿ ತಂಡ 8 ವಿಕೆಟ್ಗಳಿಂದಲೇ ಗೆದ್ದಿತ್ತು. ಐಪಿಎಲ್ ಫೈನಲ್ನಲ್ಲೂ ಸನ್ರೈಸರ್ಸ್ 18.3 ಓವರ್ಗಳಲ್ಲೇ 113 ರನ್ಗಳಿಗೆ ಆಲೌಟ್ ಆಗಿದ್ದರೆ, ಕೆಕೆಆರ್ 8 ವಿಕೆಟ್ಗಳಿಂದಲೇ ಜಯಿಸಿತು.
ಡಬ್ಲ್ಯುಪಿಎಲ್ನಲ್ಲೂ ಮುಂಬೈ ಆಟಗಾರ್ತಿ (ಸ್ಮೃತಿ ಮಂದನಾ) ಸಾರಥ್ಯದ ತಂಡವೇ ಗೆದ್ದಿದ್ದರೆ, ಐಪಿಎಲ್ನಲ್ಲೂ ಮುಂಬೈ ಆಟಗಾರನ (ಶ್ರೇಯಸ್ ಅಯ್ಯರ್) ಸಾರಥ್ಯದ ತಂಡವೇ ಗೆದ್ದಿತು. ಎರಡೂ ಫೈನಲ್ಗಳಲ್ಲಿ ಸೋತ ತಂಡಕ್ಕೆ ಆಸ್ಟ್ರೆಲಿಯನ್ನರೇ (ಮೆಗ್ ಲ್ಯಾನಿಂಗ್, ಪ್ಯಾಟ್ ಕಮ್ಮಿನ್ಸ್) ನಾಯಕರಾಗಿದ್ದರು. ಎರಡೂ ಫೈನಲ್ಗಳಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ತಂಡವೇ ಸೋತಿತು.